ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಯ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಎಲ್.ಕೆ. ಅತೀಕ್  ಚಾಲನೆ

Prasthutha|

ಮಂಗಳೂರು:  ಒತ್ತಡದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಂದಿಗೂ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಬಾರದು, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಜಿಲ್ಲಾ, ತಾಲೂಕು ಪಂಚಾಯತ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಸಲಹೆ ನೀಡಿದರು.

- Advertisement -

 ಜಿಲ್ಲಾ ಪಂಚಾಯತ್, ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆ ಹಾಗೂ ದೇರಳಕಟ್ಟೆಯ ಯೆನಪೋಯ (ಡೀಮ್ಡ್ ವಿಶ್ವವಿದ್ಯಾಲಯ)ದ ವತಿಯಿಂದ ಶುಕ್ರವಾರ ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳಿಗೆ ಜಿಲ್ಲಾ, ತಾಲೂಕು ಪಂಚಾಯತ್ ನೌಕರರಿಗೆ ಪೂರ್ಣ ಪ್ರಮಾಣದ ಆರೋಗ್ಯ ತಪಾಸಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಉತ್ತಮ ಆರೋಗ್ಯ ಹೊಂದುವಂತೆ ಗ್ರಾಮೀಣರಲ್ಲಿ ತಿಳುವಳಿಕೆ ಮೂಡಿಸುವ ಅಧಿಕಾರಿ, ಸಿಬ್ಬಂದಿಗಳೇ, ತಮ್ಮ ಆರೋಗ್ಯದ ಕುರಿತು ನಿರ್ಲಕ್ಷ್ಯ ವಹಿಸಬಾರದು, ಜಿಲ್ಲೆಯ ಎಲ್ಲಾ ಪಂಚಾಯತ್ ಪಿಡಿಒಗಳು, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಆರೋಗ್ಯ ತಪಾಸಣಾ ಶಿಬಿರವನ್ನು  ಹಮ್ಮಿಕೊಂಡಿರುವುದು ಶ್ಲಾಘನೀಯ, ಇದನ್ನು ರಾಜ್ಯಕ್ಕೆ ವಿಸ್ತರಿಸಬೇಕೆಂಬ ಆಶಯವಿದೆ ಎಂದರು.

- Advertisement -

ಗ್ರಾಮೀಣ ಅಮೃತ ಯೋಜನೆಯ ಮೂಲಕ ಗ್ರಾಮಿಣ ಜನತೆಯನ್ನು ತಪಾಸಣೆಗೆ ಒಳಪಡಿಸಿ ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ಪತ್ತೆ ಹಚ್ಚಲಾಗುತ್ತಿದೆ. 14 ಜಿಲ್ಲೆಗಳಲ್ಲಿ ಜಾರಿಯಲ್ಲಿದ್ದ ಯೋಜನೆಯನ್ನು ರಾಜ್ಯಕ್ಕೆ ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಂ.ವಿಜಯಕುಮಾರ್, ಕೆಎಂಸಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಪದ್ಮನಾಭ ಕಾಮತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ‌.ಸದಾಶಿವ ಶ್ಯಾನುಭೋಗ್, ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್, ಜಿ.ಪಂ. ಉಪ ಕಾರ್ಯದರ್ಶಿ ಆನಂದ ಕುಮಾರ್, ಸಹಾಯಕ ಆಯುಕ್ತ ಮದನ್ ಮೋಹನ್ ವೇದಿಕೆಯಲ್ಲಿದ್ದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಸ್ವಾಗತಿಸಿದರು. ಆಡಳಿತ ಶಾಖೆಯ ಮುಖ್ಯಸ್ಥ ಮಹೇಶ್ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು.

 ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ನೌಕರರು, ಉಪಸ್ಥಿತರಿದ್ದರು.

Join Whatsapp