ಕಾಂತಾರ ಚಿತ್ರದಲ್ಲಿ ಪರಿಶಿಷ್ಟರಿಗೆ ಅವಮಾನ: ದಲಿತ ಸಂಘಟನೆಗಳಿಂದ ಆರೋಪ

Prasthutha|

ಮಂಗಳೂರು: ಕಾಂತಾರ ಎಂಬ ಚಿತ್ರದಲ್ಲಿ ಪರಿಶಿಷ್ಟ ಜಾತಿಯವರನ್ನು ಕೀಳಾಗಿ ಚಿತ್ರಿಸಿ ಅವಮಾನ ಮಾಡಲಾಗಿದೆ.  ದೈವಾರಾಧನೆಯನ್ನು ವಿಕೃತಗೊಳಿಸಲಾಗಿದೆ. ಎಸ್ ಸಿ/ ಎಸ್ ಟಿಗಳನ್ನು ಕೀಳಾಗಿ ಕಂಡ ದೃಶ್ಯಗಳನ್ನು ಕತ್ತರಿಸಬೇಕು ಎಂದು ಹಲವು ದಲಿತ ಸಂಘಟನೆಗಳು ಆಗ್ರಹಿಸಿವೆ.

- Advertisement -

ಕಾಂತಾರದ ಬಗ್ಗೆ ಎಲ್ಲೆಡೆ ಮೆಚ್ಚುಗೆ ಸರಿ. ಅದರಲ್ಲಿನ ಎಲ್ಲ ಕಲಾವಿದರನ್ನು ಅಭಿನಂದಿಸುತ್ತೇವೆ. ಆದರೆ ಚಿತ್ರದಲ್ಲಿ ಸಾಕಷ್ಟು ಕಡೆ ದಲಿತರು, ಮಹಿಳೆಯರು ಮತ್ತು ಯುವ ಜನರನ್ನು ಅವಹೇಳನ ಮಾಡಲಾಗಿದೆ. ಯುವಕರಿಗೆ ಹಣ ಕೊಟ್ಟರೆ ಏನೂ ಮಾಡುವರು ಎಂಬಂತೆ ಚಿತ್ರಿಸಿರುವುದು ಖಂಡನೀಯ. ದೈವಾರಾಧನೆಯನ್ನು ಚಿತ್ರದಲ್ಲಿ ಕೆಟ್ಟದಾಗಿ ತೋರಿಸಿದ್ದಾರೆ. ಹಲವು ದೈವ ನರ್ತಕರು ನಮ್ಮ ಬಳಿ ಶೋಕ ವ್ಯಕ್ತಪಡಿಸಿದ್ದಾರೆ. ಆದರೆ ಅದನ್ನು ಸಾರ್ವಜನಿಕವಾಗಿ ಖಂಡಿಸಿದರೆ ನಮ್ಮ ವೃತ್ತಿಗೆ ತೊಂದರೆ ಆಗಬಹುದು ಎಂದು ನೇರ ಹೇಳಲು ಹೆದರಿದ್ದಾರೆ ಎಂದು ದಲಿತ ಮುಖಂಡ ಲೋಲಾಕ್ಷ ಹೇಳಿದರು.

ದೈವ ಜಾಗದ ಯಜಮಾನರು ಎಷ್ಟೊಂದು ಕ್ರೂರವಾಗಿ ನಡೆಸುತ್ತಾರೆ ಎಂದು ಚಿತ್ರದಲ್ಲಿ ತೋರಿಸಿದ್ದಾರೆ. ಆದರೆ ದೈವಾರಾಧನೆಯಲ್ಲಿ ಯಾವ ಜಾತಿ ಜನಾಂಗ ಕೂಡ ಬಾಲಕಿಯನ್ನು ಕೊಲ್ಲುವಂತೆ ನಡೆದುಕೊಳ್ಳುವುದಿಲ್ಲ. ನಮ್ಮ ದೈವಾರಾಧನೆ ಸೌಹಾರ್ದದದ್ದು. ಈ ಚಿತ್ರ ವಿಕೃತಿಯ ದೈವಾರಾಧನೆ. ನಮ್ಮ ಪರವ, ಪಂಬದ, ನಲಿಕೆಯವರು ದೈವವಾಗಿ ನಿಲ್ಲುತ್ತಾರೆ. ಅವರ ಕಟ್ಟುಕಟ್ಟಳೆಗಳು ನಮ್ಮ ನಂಬಿಕೆಯವು. ಸಿನಿಮಾದಲ್ಲಿ ಆ ಮೂಲ ನಂಬಿಕೆಗೆ ಹಾನಿ ಮಾಡಿದ್ದಾರೆ ಎಂದು ಸಮತಾ ಸೈನಿಕ ದಳದ ರಾಜ್ಯ ಕಾರ್ಯದರ್ಶಿ ಲೋಲಾಕ್ಷ ಹೇಳಿದರು.

- Advertisement -

ದೈವ ನರ್ತಕ ಮಹಿಳೆಯರು ಕೆಟ್ಟದಾಗಿ ಚಿತ್ರದಲ್ಲಿ ಮಾತನಾಡಿದರು. ಆದರೆ ನಮ್ಮ ಕುಟುಂಬಗಳಲ್ಲಿ ಹಾಗೆ ಮಹಿಳೆಯರಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಲಿತರ ಶೋಷಣೆಯು ಇದ್ದರೂ, ಭಾರತದ ಇತರ ಕಡೆಗಿಂತ ತುಂಬಾ ಕಡಿಮೆ. ಅದಕ್ಕೆ ಕಾರಣ ನಮ್ಮ ದೈವಾರಾಧನೆಗಳು ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಣಾರ ಸಮಾಜದ ಪದ್ಮನಾಭ, ಬಾಕುಡ ಸಮಾಜದ ಪದ್ಮನಾಭ, ದಸಂಸಂ ಯು. ಉಮೇಶ, ಸಾಮಾಜಿಕ ಚಿಂತಕ ಕಾಂತಪ್ಪ ಅಲಂಗಾರ್, ದ. ಸ.ದ ನಾಗೇಶ್, ಕ.ದ.ಸ.ಸಂ.ನ ಲಕ್ಷ್ಮಣ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.

Join Whatsapp