ಕಾಬೂಲ್ : ಕಳೆದ ತಿಂಗಳು ತಾಲಿಬಾನ್ ಪಡೆಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ದೇಶದಿಂದ ಪಲಾಯನ ಮಾಡಿದ ಅಧಿಕಾರಿಗಳು ಅಫ್ಘಾನಿಸ್ತಾನಕ್ಕೆ ಹಿಂದಿರುಗುವಂತೆ ನೂತನ ಹಂಗಾಮಿ ಅಧ್ಯಕ್ಷ ಮುಲ್ಲಾ ಮುಹಮ್ಮದ್ ಹಸನ್ ಅಖುಂದ್ ಕರೆ ನೀಡಿದ್ದಾರೆ.
ರಾಷ್ಟ್ರದ ಭದ್ರತೆ ಮತ್ತು ಅಭಿವೃದ್ದಿಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ತಮ್ಮ ಮರಳುವಿಕೆ ಅತ್ಯಗತ್ಯ ಎಂದು ಅವರು ತಿಳಿಸಿದರು. ನೂತನ ಸರ್ಕಾರವು ರಾಜತಾಂತ್ರಿಕರು, ರಾಯಭಾರಿ ಕಚೇರಿಗಳು ಮತ್ತು ಮಾನವೀಯ ಸೇವಾ ಸಂಸ್ಥೆಗಳ ಸಿಬ್ಬಂಧಿಗಳ ಭದ್ರತೆಯನ್ನು ಖಾತ್ರಿಪಡಿಸುತ್ತದೆ ಎಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು. ಅಫ್ಘಾನಿಸ್ತಾನ ಮತ್ತು ವಿದೇಶ ರಾಷ್ಟ್ರಗಳೊಂದಿಗೆ ಸಕಾರಾತ್ಮಕ ಮತ್ತು ಉತ್ತಮವಾದ ಸಂಬಂಧವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಿದೆ ಎಂದು ಮುಲ್ಲಾ ಮುಹಮ್ಮದ್ ಹಸನ್ ಅಖುಂದ್ ತಿಳಿಸಿದರು.
ಅಖುಂದ್ ಅವರು ತಾಲಿಬಾನ್ ಸಂಸ್ಥಾಪಕ, ರಾಜಕೀಯ ಸಲಹೆಗಾರ ಮತ್ತು ಪರಮೋಚ್ಚ ನಾಯಕ ದಿವಂಗತ ಮುಲ್ಲಾ ಉಮರ್ ಅವರ ನಿಕಟವರ್ತಿಯಾಗಿದಾರೆ. ಕಳೆದ 20 ವರ್ಷಗಳ ಕರಾಳ ಇತಿಹಾಸದಲ್ಲಿ ಅಫ್ಘಾನ್ ಜನತೆ ಜೀವನದಲ್ಲಿ ಭಾರೀ ನಾಶನಷ್ಟವನ್ನು ಅನುಭವಿಸಿದೆ. ರಕ್ತಪಾತ, ಕೊಲೆ ಮತ್ತು ಜಾಗತಿಕವಾಗಿ ಜನರ ತಿರಸ್ಕಾರದ ಹಂತ ಕೊನೆಗೊಂಡಿದೆ. ಇದಕ್ಕಾಗಿ ನಾವು ಭಾರೀ ಬೆಲೆಯನ್ನು ತೆರಬೇಕಾಯಿತ್ತೆಂದು ಅವರು ತಿಳಿಸಿದರು.
2001 ರ ಅಮೆರಿಕದ ಆಕ್ರಮಣದ ಬಳಿಕ ವಿರೋಧಿ ಬಣದ ಆಡಳಿತದೊಂದಿಗೆ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ಕ್ಷಮೆ ನೀಡಲು ತಾಲಿಬಾನ್ ಸದಾ ಸಿದ್ದವಿದೆಯೆಂದು ಅಖುಂದ್ ಅವರು ಪುನರುಚ್ಚರಿಸಿದರು. ಅಫ್ಘಾನ್ ರಾಷ್ಟ್ರದ ಯಶಸ್ಸು ಮತ್ತು ಕಲ್ಯಾಣದ ಹಿತದೃಷ್ಟಿಯಿಂದ ಅಧಿಕಾರಿಗಳ ಮರಳುವಿಕೆ ಅತ್ಯಗತ್ಯವೆಂದು ಅವರು ತಿಳಿಸಿದರು.