ಉಕ್ರೇನ್ʼನಿಂದ ಎಲ್ಲ ಕನ್ನಡಿಗರನ್ನು ಕೂಡಲೇ ರಕ್ಷಿಸುವಂತೆ ಎಚ್.ಡಿ.ಕುಮಾರಸ್ವಾಮಿ ಆಗ್ರಹ

Prasthutha|

ಬೆಂಗಳೂರು: ಉಕ್ರೇನ್ ಮೇಲಿನ ರಷ್ಯಾ ದಾಳಿಯಲ್ಲಿ ಅಸುನೀಗಿದ ಹಾವೇರಿ ಜಿಲ್ಲೆಯ ವೈದ್ಯ ವಿದ್ಯಾರ್ಥಿ ನವೀನ್ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಯುದ್ಧಪೀಡಿತ ಉಕ್ರೇನ್ʼನಲ್ಲಿ ಇನ್ನೂ ಸಿಲುಕಿರುವ ಎಲ್ಲ ಕನ್ನಡಿಗರನ್ನು ಕೂಡಲೇ ರಕ್ಷಿಸಬೇಕು ಎಂದು ಕೇಂದ್ರ-ರಾಜ್ಯ ಸರಕಾರಗಳನ್ನು ಒತ್ತಾಯ ಮಾಡಿದ್ದಾರೆ.

- Advertisement -

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು; “ರಷ್ಯಾ ತೀವ್ರವಾಗಿ ದಾಳಿ ಮಾಡಿರುವ ಖಾರ್ಕೀವ್ ಪ್ರದೇಶದಲ್ಲಿ ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅನ್ನ ನೀರಿಗೂ ಅವರು ಕಷ್ಟಪಡುತ್ತಿದ್ದಾರೆ. ಕೂಡಲೇ ಸರಕಾರಗಳು ಅವರ ನೆರವಿಗೆ ಹೋಗಬೇಕು” ಎಂದು ಆಗ್ರಹಿಸಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಇಂದು ಹಾವೇರಿ ಜಿಲ್ಲೆ ಚಳಗೇರಿಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಬಲಿ ಆಗಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಯುದ್ಧದಿಂದ ತತ್ತರಿಸಿರುವ ಖಾರ್ಕೀವ್ ನಗರದಲ್ಲಿದ್ದ ಆ ವಿದ್ಯಾರ್ಥಿ ಶೆಲ್ ದಾಳಿಯಲ್ಲಿ ಅಸುನೀಗಿದ್ದಾರೆಂಬ ಸುದ್ದಿ ಶಿವರಾತ್ರಿ ದಿನ ಬರಸಿಡಿಲಿನಂತೆ ಅಪ್ಪಳಿಸಿದೆ.

- Advertisement -

ವೈದ್ಯನಾಗಬೇಕು ಎಂಬ ಕನಸು ಹೊತ್ತು ನವೀನ್ ಅಲ್ಲಿಗೆ ಹೋಗಿದ್ದರು. ಭಾರತದಲ್ಲಿ, ದುಬಾರಿ ವೈದ್ಯ ಶಿಕ್ಷಣ ಕೈಗೆಟುಕದೇ ಅವರು ಉಕ್ರೇನ್ʼಗೆ ತೆರಳಿದ್ದರು. ಯುದ್ಧವು ಅವರ ಕನಸನ್ನು ನುಚ್ಚುನೂರು ಮಾಡಿದೆ. ಇಂಥ ಅನೇಕ ವಿದ್ಯಾರ್ಥಿಗಳು ಇನ್ನೂ ಖಾರ್ಕೀವ್ ನಗರದಲ್ಲೇ ಸಿಲುಕೊಂಡಿದ್ದಾರೆ.

ಶೆಲ್ ದಾಳಿಗೆ ತುತ್ತಾಗುವ ಮುನ್ನ 2 ಸಲ ತಮ್ಮ ಪೋಷಕರಿಗೆ ನವೀನ್ ಕರೆ ಮಾಡಿದ್ದರು, ಅದಾದ ಸ್ವಲ್ಪ ಹೊತ್ತಿನಲ್ಲೇ ಅಸುನೀಗಿದ್ದಾರೆ ಎಂಬುದನ್ನು ನೆನೆದರೆ ಬಹಳ ನೋವಾಗುತ್ತದೆ. ಬಾಂಬ್, ಕ್ಷಿಪಣಿ, ಶೆಲ್ ಸ್ಫೋಟಗಳಿಂದ ಅವರೆಲ್ಲರೂ ಖಾರ್ಕೀವ್ ನಗರದಲ್ಲಿ ತತ್ತರಿಸುತ್ತಿದ್ದಾರೆ. ಮೊದಲೇ ಇಲ್ಲಿ ಸಿಲುಕಿರುವವರನ್ನು ರಕ್ಷಿಸಬೇಕಿತ್ತು.

ಆ ವಿದ್ಯಾರ್ಥಿಗಳೆಲ್ಲರೂ 6 ದಿನಗಳಿಂದ ಬಂಕರ್ʼನಲ್ಲೇ ಇದ್ದಾರೆ. ಅವರೀಗ ಕೇವಲ ಚಾಕೋಲೇಟ್, ಬಿಸ್ಕೆಟ್, ಸ್ನೀಕರ್ʼಗಳನ್ನು ತಿನ್ನುತ್ತಾ ಬದುಕುಳಿದಿದ್ದಾರೆ. ನೀರು-ಆಹಾರಕ್ಕೆ ತತ್ವಾರವಾಗಿದೆ ಎಂದು ಅಲ್ಲಿನ ಕನ್ನಡ ವಿದ್ಯಾರ್ಥಿಗಳು ಮಾಧ್ಯಮಗಳ ಮೂಲಕ ಅಳಲು ತೋಡಿಕೊಳ್ಳುತ್ತಿದ್ದಾರೆ.

ಕೇಂದ್ರ ಸರಕಾರ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಬೇಕು. ಕನ್ನಡಿಗರ ರಕ್ಷಣೆಗೆ ರಾಜ್ಯ ಸರಕಾರವೂ ಮತ್ತಷ್ಟು ಕ್ಷಿಪ್ರವಾಗಿ ಕೆಲಸ ಮಾಡಬೇಕು. ಇನ್ನೊಂದು ಜೀವ ಹೋಗಲೂ ಬಿಡಬಾರದು. ಉಕ್ರೇನ್ ಭಾರತೀಯ ರಾಯಭಾರ ಕಚೇರಿ ಸೂಕ್ತವಾಗಿ ಸ್ಪಂದಿಸುತ್ತಿವಲ್ಲವೆಂಬ ಆರೋಪವೂ ಕೇಳಿಬರುತ್ತಿದೆ.

ವಿದ್ಯಾರ್ಥಿ ನವೀನ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಮಗನನ್ನು ಕಳೆದುಕೊಂಡು ಅತೀವ ದುಃಖದಲ್ಲಿರುವ ಅವರ ಪೋಷಕರಿಗೆ ನನ್ನ ಸಂತಾಪಗಳು. ನವೀನ್ ಅವರ ಪಾರ್ಥೀವ ಶರೀರವನ್ನು ಆದಷ್ಟು ಬೇಗ ಅವರ ಕುಟುಂಬಕ್ಕೆ ತಲುಪಿಸುವ ಕೆಲಸ ಸರಕಾರದಿಂದ ಆಗಬೇಕು ಎಂದು ಅವರು ಹೇಳಿದ್ದಾರೆ.



Join Whatsapp