ಸಿಎಎಯನ್ನು ವಿರೋಧಿಸುವುದು ಕಾನೂನು ಬಾಹಿರವೇ? – ನ್ಯಾಯಾಲಯದಲ್ಲಿ ಉಮರ್ ಖಾಲಿದ್ ವಾದ
ನವದೆಹಲಿ: 2020ರಲ್ಲಿ ನಡೆದ ದೆಹಲಿ ಗಲಭೆಯ ಪಿತೂರಿ ಆರೋಪದಲ್ಲಿ ಯುಎಪಿಎ ದಾಖಲಿಸಿ ಬಂಧಿಸಲ್ಪಟ್ಟಿದ್ದ ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯ ಮೇಲಿನ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ಕಾಯ್ದಿರಿಸಿದೆ.
ಹಿಂಸಾಚಾರದಲ್ಲಿ ತನಗೆ ಯಾವುದೇ ರೀತಿಯ “ಕ್ರಿಮಿನಲ್ ಪಾತ್ರ”ವೋ, ಅಥವಾ ಇತರ ಆರೋಪಿಗಳೊಂದಿಗೆ “ಪಿತೂರಿಯ ಸಂಪರ್ಕ”ವೋ ಇಲ್ಲ ಎಂದು ಮಾಜಿ ಜೆಎನ್ಯು ವಿದ್ಯಾರ್ಥಿ ಉಮರ್ ಖಾಲಿದ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯಿದೆ ಮತ್ತಿತರ ವಿಚಾರವಾಗಿ ತನ್ನ ವಿರುದ್ಧದ ಪ್ರಾಸಿಕ್ಯೂಷನ್ನ ವಾದಕ್ಕೆ ಪೂರಕವಾದ ಯಾವುದೇ ಪುರಾವೆಗಳು ಇಲ್ಲ ಎಂದು 2020ರ ಸೆಪ್ಟೆಂಬರ್ನಲ್ಲಿ ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟ ಉಮರ್ ಖಾಲಿದ್ ನ್ಯಾಯಾಲಯಕ್ಕೆ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸುವುದು ಕಾನೂನು ಬಾಹಿರವೇ ಎಂದು ಪ್ರಶ್ನಿಸಿದ ಉಮರ್ ಖಾಲಿದ್, ದೇಶದಲ್ಲಿ ಚರ್ಚೆಯಾಗುತ್ತಿರುವ ವಿಚಾರಗಳನ್ನು ಎತ್ತುವುದು ಕಾನೂನು ಬಾಹಿರವಲ್ಲ ಎಂದು ಸಮರ್ಥಿಸಿದರು. ಅಮರಾವತಿಯ ಅವರ ಭಾಷಣಣದ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದ ಅವರು, ಇದು ಎಲ್ಲಿಯೂ ಹಿಂಸಾಚಾರಕ್ಕೆ ಕಾರಣವಾಗಿಲ್ಲ. ಪೊಲೀಸರ ಆರೋಪಗಳು ನಿರಾಧಾರವಾಗಿದೆ ಎಂದರು.
ಉಮರ್ ಖಾಲಿದ್ ಪರವಾಗಿ ಹಿರಿಯ ವಕೀಲ ತ್ರಿದೀಪ್ ಪೈಸ್ ವಾದಿಸಿದ್ದರು.