ಏಷ್ಯಾ ಕಪ್‌ | ಮೈದಾನದಲ್ಲಿ ಕಿತ್ತಾಡಿದ ಆಟಗಾರರಿಗೆ ದಂಡ ವಿಧಿಸಿದ ಐಸಿಸಿ

Prasthutha|

ದುಬೈ: ಏಷ್ಯಾ ಕಪ್‌ ಪಂದ್ಯದ ವೇಳೆ ಮೈದಾನದಲ್ಲಿ ಕಿತ್ತಾಡಿಕೊಂಡಿದ್ದ ಅಫ್ಘಾನಿಸ್ತಾನದ ಫರೀದ್‌ ಅಹ್ಮದ್‌ ಮತ್ತು ಪಾಕಿಸ್ತಾನದ ಆಸಿಫ್‌ ಅಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ದಂಡ ವಿಧಿಸಿದೆ.

- Advertisement -

ಏಷ್ಯಾ ಕಪ್‌ ಟೂರ್ನಿಯ ಸೂಪರ್‌ 4 ಹಂತದ ಮೊದಲ ಪಂದ್ಯದಲ್ಲಿ, ಸೆಪ್ಟಂಬರ್‌ 3ರಂದು ಪಾಕಿಸ್ತಾನ- ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯದ ರೋಚಕ ಘಟ್ಟದಲ್ಲಿ 19ನೇ ಓವರ್‌ ಎಸೆದ ಫರೀದ್‌ ಅಹ್ಮದ್‌ ಬೌಲಿಂಗ್‌ನಲ್ಲಿ ಪಾಕ್‌ನ ಆಸಿಫ್‌ ಅಲಿ ಸಿಕ್ಸರ್‌ ಬಾರಿಸಿದ್ದರು. ಆದರೆ ಮುಂದಿನ ಎಸೆತದಲ್ಲೇ ಅಲಿ, ವಿಕೆಟ್‌ ಪಡೆಯುವಲ್ಲಿ ಫರೀದ್‌ ಯಶಸ್ವಿಯಾಗಿದ್ದರು. ಈ ವೇಳೆ ಸಂಭ್ರಮಾಚರಣೆಯ ವೇಳೆ ಉಭಯ ಆಟಗಾರರ ನಡುವೆ ವಾಕ್ಸಮರ-ತಳ್ಳಾಟ ನಡೆದಿತ್ತು. ಫರೀದ್‌ ಮೇಲೆ ಆಸಿಫ್‌ ಅಲಿ ಬ್ಯಾಟ್‌ನಿಂದ ಹಲ್ಲೆ ನಡೆಸಲು ಕೂಡ ಮುಂದಾಗಿದ್ದರು. ಈ ವೇಳೆ ಅಂಪಾಯರ್‌ ಹಾಗೂ ಇತರ ಅಫ್ಘಾನ್ ಆಟಗಾರರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ಇವರಿಬ್ಬರ ಕಿತ್ತಾಟದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿತ್ತು. ಇಬ್ಬರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಅಭಿಮಾನಿಗಳು ಒತ್ತಾಯಿಸಿದ್ದರು. ನೀತಿ ಸಂಹಿತೆಯ ಹಂತ- 1 ಅನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿರುವ ಐಸಿಸಿ, ಫರೀದ್‌ ಅಹ್ಮದ್‌ ಮತ್ತು ಪಾಕಿಸ್ತಾನದ ಆಸಿಫ್‌ ಅಲಿಗೆ ಪಂದ್ಯದ ಶುಲ್ಕದ ಶೇ. 25ರಷ್ಟನ್ನು ದಂಡ ವಿಧಿಸಿದೆ.

- Advertisement -

ಪಾಕಿಸ್ತಾನದ ಆಸಿಫ್‌ ಅಲಿ, ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.6 ಅನ್ನು ಉಲ್ಲಂಘಿಸಿದ್ದಾರೆ. ಈ ನಿಯಮ “ಅಂತಾರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಅವಮಾನಕರ ನಡವಳಿಕೆ ತೋರುವುದಕ್ಕೆ ಸಂಬಂಧಿಸಿದೆ. ಜೊತೆಗೆ ಫರೀದ್ ಕೂಡ ಐಸಿಸಿ ನೀತಿ ಸಂಹಿತೆಯ 2.1.12 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಹೀಗಾಗಿ ಇಬ್ಬರಿಗೂ ಪಂದ್ಯ ಶುಲ್ಕದ ಶೇ. 25ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪಂದ್ಯದ ಬಳಿಕ ಅಫ್ಘಾನಿಸ್ತಾನದ ಅಭಿಮಾನಿಗಳು ಶಾರ್ಜಾ ಮೈದಾನದ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಕುರ್ಚಿಗಳನ್ನು ಕಿತ್ತು, ಪಾಕಿಸ್ತಾನದ ಅಭಿಮಾನಿಗಳ ಮೇಲೆ ಎಸೆದು ಹಲ್ಲೆ ನಡೆಸಿದ್ದರು. 

Join Whatsapp