ಮುಂಬೈ: ಮಹಾರಾಷ್ಟ್ರದಲ್ಲಿ ಸಾರ್ವಜನಿಕರ ಶಾಂತಿ ಕದಡಿದ್ದಕ್ಕಾಗಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಅವರ ಮಗ ಆದಿತ್ಯ ಠಾಕ್ರೆ, ಶಿವಸೇನೆ ಸಂಸದ ಸಂಜಯ್ ರಾವುತ್ ವಿರುದ್ಧ ದೇಶದ್ರೋಹದ ಎಫ್ ಐಆರ್ ದಾಖಲಿಸುವಂತೆ ಬಾಂಬೆ ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಪಿಐಎಲ್- ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾ ಮಾಡಿದೆ.
ಬಾಂಬೆ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ದೀಪಂಕರ್ ದತ್ತ ಹಾಗೂ ಜಸ್ಟಿಸ್ ಮಕರಂದ್ ಎಸ್. ಕಾರ್ಣಿಕ್ ಅವರಿದ್ದ ಪೀಠವು ಇಂದೇ ಕೈಗೆತ್ತಿಕೊಂಡು ಅರ್ಜಿಯನ್ನು ವಜಾ ಮಾಡಿತು.
ಹೇಮಂತ ಬಾಬುರಾವ್ ಪಾಟೀಲ್ ಎಂಬ ಪುಣೆ ನಿವಾಸಿ ಈ ಪಿಐಎಲ್- ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು. ಪಾಟೀಲ್ ಪರ ಹಾಜರಾದ ವಕೀಲ ಆರ್. ಎನ್. ಕಚವೆ ಅವರು ಶಿವಸೇನೆಯ ನಾಯಕರಾದ ಉದ್ಧವ್, ಆದಿತ್ಯ, ರಾವುತ್ ರ ಜೀವ ಬೆದರಿಕೆಯಿಂದಾಗಿ ಬಂಡಾಯ ಶಾಸಕರು ಅಸ್ಸಾಮಿಗೆ ಹೋಗಬೇಕಾಯಿತು ಎಂದು ವಾದಿಸಿದರು.
ಹುರುಳಿಲ್ಲದ ಸಮಯ ಕೊಲ್ಲುವ ಪಿಐಎಲ್ ಎಂದು ಕೋರ್ಟು ಅಭಿಪ್ರಾಯ ಪಟ್ಟಿತು. ಆದರೆ ಅರ್ಜಿದಾರರು ಖಾಸಗಿ ದೂರಾಗಿ ಇದನ್ನು ಮ್ಯಾಜಿಸ್ಟ್ರೇಟರೆದುರು ಇಡಬಹುದು ಎಂದೂ ಹೈಕೋರ್ಟು ಹೇಳಿತು.