ಹಾವೇರಿ: ಬೆಳಗಾವಿ ಮೂಲದ ಹಾವೇರಿ ತಹಶೀಲ್ದಾರ್ ಗಿರೀಶ್ ಸ್ವಾದಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಅವರ ಪತ್ನಿ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಸ್ವಾದಿ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಹಲವು ಶಂಕೆಗಳಿಗೆ ಕಾರಣವಾಗಿದೆ. ಅಕ್ಟೋಬರ್ .31ರಂದು ರಾತ್ರಿ 9.30ಕ್ಕೆ ಅವರು, ಪತ್ನಿ ಭಾಗ್ಯಶ್ರೀ ಗೆ ಕೊನೆಯ ಬಾರಿ ಕರೆ ಮಾಡಿದ್ದರು. ರಾತ್ರಿ ಮನೆಗೆ ಬರುವುದಿಲ್ಲ. ನವೆಂಬರ್ 1 ಕರ್ನಾಟಕ ರಾಜ್ಯೋತ್ಸವ ಇದೆ. ಇಲ್ಲೇ ಹಾವೇರಿಯ ಪ್ರವಾಸಿ ಮಂದಿರದಲ್ಲಿ ಇಲ್ಲವೇ ಹಾನಗಲ್ ರಸ್ತೆಯಲ್ಲಿರುವ ಶಿವಾ ರೆಸಿಡೆನ್ಸಿಯಲ್ಲಿ ಉಳಿದುಕೊಳ್ಳುವುದಾಗಿ ಹೇಳಿದ್ದರೆಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ನವೆಂಬರ್ 1ರಂದು ಬೆಳಿಗ್ಗೆ 6 ಗಂಟೆಗೆ ಕಚೇರಿಯ ವಾಹನ ಚಾಲಕ ಹಾವೇರಿಯ ಸಿದ್ಧೇಶ್ವರ ನಗರದ ತಹಶೀಲ್ದಾರ್ ಅವರ ಮನೆಗೆ ಬಂದು ವಿಚಾರಿಸಿದಾಗ ತಹಶೀಲ್ದಾರ್ ಮನೆಯಲ್ಲಿ ಇರಲಿಲ್ಲ. ತಹಶೀಲ್ದಾರ್ ಸಾಮಾನ್ಯವಾಗಿ ವಾಸ್ತವ್ಯ ಹೂಡುತ್ತಿದ್ದ ಶಿವಾ ರೆಸಿಡೆನ್ಸಿಗೆ ಹೋಗಿ ವಿಚಾರಿಸಿದಾಗ ಅಲ್ಲಿಂದ ಅವರು ತೆರಳಿದ್ದಾರೆ ಎಂಬ ವಿಷಯ ತಿಳಿಯಿತು ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ, ಅನಾರೋಗ್ಯ ಹಿನ್ನೆಲೆಯಲ್ಲಿ ಸ್ವಾದಿ, ಒಂದು ತಿಂಗಳು ರಜೆ ಪಡೆದಿದ್ದಾರೆ ಎಂದು ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ತಿಳಿಸಿದ್ದು, ಕಳೆದ ಮೂರು ದಿನದಿಂದ ತಹಶೀಲ್ದಾರ್ ಪತ್ತೆಯಿಲ್ಲ ಎಂದು ತಿಳಿದು ಬಂದಿದೆ.