ಮುಂಬೈ: ಜೈಲಿನಲ್ಲಿ ಮನೆಯ ಊಟಕ್ಕೆ ಅವಕಾಶ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್’ಗೆ ‘ನೀವು ಮೊದಲು ಜೈಲಿನ ಆಹಾರವನ್ನು ತಿನ್ನಿ, ನಂತರ ನಾನು ನಿಮ್ಮ ಮನವಿಯನ್ನು ಪರಿಗಣಿಸುತ್ತೇನೆ’ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಪ್ರತಿಕ್ರಿಯಿಸಿದ್ದಾರೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಈ ತಿಂಗಳ ಆರಂಭದಲ್ಲಿ ಬಂಧಿತರಾಗಿದ್ದ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್’ರ ನ್ಯಾಯಾಂಗ ಬಂಧನದ ಅವಧಿ ಸೋಮವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಆರೋಪಿ ಮಾಜಿ ಗೃಹ ಸಚಿವರನ್ನು ವಿಶೇಷ PMLA ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ED ಅಧಿಕಾರಿಗಳು ದೇಶಮುಖ್’ರನ್ನು ಮತ್ತಷ್ಟು ವಿಚಾರಣೆ ನಡೆಸುವ ಅಗತ್ಯವಿಲ್ಲವೆಂದು ಹೇಳಿದ ಬಳಿಕ ಮಾಜಿ ಗೃಹ ಸಚಿವರನ್ನು ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವಿಶೇಷ ನ್ಯಾಯಾಲಯದಲ್ಲಿ ಮನೆ ಊಟಕ್ಕಾಗಿ ಅನಿಲ್ ದೇಶಮುಖ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ಆದರೆ 71 ವರ್ಷ ವಯಸ್ಸಿನ ಅನಿಲ್ ದೇಶಮುಖ್ ಅವರ ವೈದ್ಯಕೀಯ ಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಸಿಗೆಗಾಗಿ ಅವರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯವು ಪುರಸ್ಕರಿಸಿದೆ.
ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಆರೋಪವಿದೆ. ಏಪ್ರಿಲ್ 21ರಂದು ಸಿಬಿಐ ತಂಡದಿಂದ ಎನ್‌ಸಿಪಿ ನಾಯಕ ಅನಿಲ್ ದೇಶ್ ಮುಖ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಅಧಿಕಾರ ದುರುಪಯೋಗ, ಭ್ರಷ್ಟಾಚಾರದ ಆರೋಪವನ್ನು ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಮಾಜಿ ಸಚಿವ ಅನಿಲ್ ದೇಶ್‌ಮುಖ್‌ಗೆ ಸುಮಾರು ಐದು ಬಾರಿ ಸಮನ್ಸ್ ಕಳುಹಿಸಿತ್ತು. ಆದರೆ ಅನಿಲ್ ದೇಶ್‌ಮುಖ್ ಹಾಜರಾಗಿರಲಿಲ್ಲ. ಹಾಗೆಯೇ ಸಮನ್ಸ್’ಗೆ ಯಾವುದೇ ಉತ್ತರವನ್ನೂ ನೀಡಿರಲಿಲ್ಲ. ಈ ಹಿನ್ನೆಲೆ ಬಳಿಕ ಲುಕ್’ಔಟ್ ನೋಟಿಸ್ ಹೊರಡಿಸಲಾಗಿತ್ತು. ಲುಕ್’ಔಟ್ ನೋಟಿಸ್ ಬಳಿಕ ಅನಿಲ್ ದೇಶ್‌ಮುಖ್ ತನ್ನ ವಿರುದ್ಧದ ಸಮನ್ಸ್ ರದ್ದು ಮಾಡುವಂತೆ ಕೋರಿ ಬಾಂಬೆ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬಾಂಬೆ ಹೈಕೋರ್ಟ್ ದೇಶ್‌ಮುಖ್’ರ ಅರ್ಜಿಯನ್ನು ವಜಾ ಮಾಡಿತ್ತು. ಹಾಗೆಯೇ ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಅಧಿಕಾರಿಗಳು ತನಿಖೆಯನ್ನು ಮುಂದುವರಿಸುವಂತೆ ಬಾಂಬೆ ಹೈಕೋರ್ಟ್ ಸೂಚನೆ ನೀಡಿತ್ತು.