ಸುರತ್ಕಲ್ | ಮುಂದುವರೆದ ಅನೈತಿಕ ಪೊಲೀಸ್ ಗಿರಿ : ಮುಸ್ಲಿಂ ಯುವಕನಿಗೆ ಥಳಿಸಿದ ಸಂಘಪರಿವಾರದ ಕಾರ್ಯಕರ್ತರು

Prasthutha|

► ಪ್ರಹ್ಲಾದ್, ಪ್ರಶಾಂತ್, ಗುರುಪ್ರಸಾದ್, ಪ್ರತೀಶ್, ಭರತ್, ಸುಖೇಶ್ ಬಂಧಿತರು !

- Advertisement -

ಸುರತ್ಕಲ್: ಸದ್ಯ ಮಂಗಳೂರಿನಲ್ಲಿ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳು ದಿನದಿಂದ ಹೆಚ್ಚಾಗತೊಡಗಿದ್ದು, ಮಂಗಳೂರಿನ ಸುರತ್ಕಲ್ ಬಳಿ ಮನೆ ಶಿಫ್ಟ್ ಮಾಡುತ್ತಿದ್ದ ಯುವತಿಗೆ ನೆರವಾಗಲು ಆಕೆಯೊಂದಿಗೆ ಹೋಗುತ್ತಿದ್ದ ಮುಸ್ಲಿಂ ಯುವಕನಿಗೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆಗೀಡಾದ ಯುವಕನನ್ನು ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಯಾಸೀನ್ ಎಂದು ಗುರುತಿಸಲಾಗಿದೆ.

ಯಾಸೀನ್ ಬೈಕ್ ಮೂಲಕ ತೆರಳುತ್ತಿದ್ದ ವೇಳೆ ಆತನನ್ನು ಹಿಂಬಾಲಿಸಿರುವ ದುಷ್ಕರ್ಮಿಗಳು ಅಡ್ಡಗಟ್ಟಿ ಥಳಿಸಿರುವ ಘಟನೆ ಸುರತ್ಕಲ್ ಬಳಿಯ ಕಲ್ಯಾಣಿ ಸಿಟಿ ಪರ್ಲ್ ಅಪಾರ್ಟ್ಮೆಂಟ್ ಬಳಿ ನಡೆದಿದೆ. ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಸಂಘಪರಿವಾರದ ಕಾರ್ಯಕರ್ತರು ಈ ಕೃತ್ಯ ಎಸಗಿದ್ದು, ಅನ್ಯ ಧರ್ಮದವರ ಜೊತೆ ಓಡಾಡದಂತೆ ಯುವತಿಗೂ ಬೆದರಿಕೆ ಒಡ್ಡಿದೆ.

- Advertisement -

ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಯುವತಿಯ ಅಪಾರ್ಟ್‌ಮೆಂಟ್ ಖಾಲಿ ಮಾಡುತ್ತಿದ್ದ ಹಿನ್ನೆಲೆ ಲಗೇಜ್ ಶಿಫ್ಟ್ ಮಾಡಿ, ಯುವತಿಯನ್ನು ಕರೆದೊಯ್ಯುತ್ತಿದ್ದ ಯಾಸೀನ್ ರನ್ನು ಹಿಂಬಾಲಿಸಿದ ಸಂಘಪರಿವಾರದ ಕಾರ್ಯಕರ್ತರ ತಂಡ ಹಲ್ಲೆ ನಡೆಸಿದೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇಬ್ಬರು ವಿದ್ಯಾರ್ಥಿಗಳು ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಅಪಾರ್ಟ್ ಮೆಂಟ್ ಖಾಲಿ ಮಾಡುವ ಸಲುವಾಗಿ ಯಾಸೀನ್ ಆಕೆಗೆ ಸಹಾಯ ಮಾಡಲು ತೆರಳಿದ್ದಾನೆ ಎನ್ನಲಾಗಿದೆ. ಇದೇ ವೇಳೆ ಕಾರ್ಯಕರ್ತರು ಅನ್ಯ ಧರ್ಮಿಯ ಯುವಕನ ಜೊತೆ ಓಡಾಡುತ್ತೀಯ ಎಂದು ಬೆದರಿಕೆ ಒಡ್ಡಿ ಧಳಿಸಿರುವುದಾಗಿ ತಿಳಿದು ಬಂದಿದೆ.

ಕೆಲವೇ ಕ್ಷಣಗಳಲ್ಲಿ ಆರೋಪಿಗಳ ಸೆರೆ

ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ ನಡೆದಿದ್ದು, ಪ್ರಹ್ಲಾದ್, ಪ್ರಶಾಂತ್, ಗುರುಪ್ರಸಾದ್, ಪ್ರತೀಶ್, ಭರತ್, ಸುಖೇಶ್ ಬಂಧಿಸಿದ್ದಾರೆ.

Join Whatsapp