ಹಾಸನ: ಅಂತಾರಾಜ್ಯ ಕಳ್ಳರ ಬಂಧನ; 27 ಲಕ್ಷ ನಗದು ವಶ

Prasthutha|

ಹಾಸನ: ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿ ಯಾಗಿದ್ದ ನಾಲ್ವರು ಅಂತಾರಾಜ್ಯ ಮತ್ತು ಅಂತರಜಿಲ್ಲಾ ಕಳ್ಳರನ್ನು ಬಂಧಿಸಿರುವ ಅರಸೀಕೆರೆ  ಗ್ರಾಮಾಂತರ ವೃತ್ತ ಪೊಲೀಸರು, 27 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

- Advertisement -

ಬಂಧಿತರಲ್ಲಿ ತಮಿಳುನಾಡು ಮೂಲದ ಮೂವರು ಮತ್ತು ಕೋಲಾರ ಜಿಲ್ಲೆಯ ಒಬ್ಬ ಸೇರಿದ್ದಾನೆ ಎಂದು ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ  ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಸಿಎಂಎಸ್ ಇನ್ಫೋಸಿಸ್ಟಂ ಲಿಮಿಟೆಡ್ ವ್ಯವಸ್ಥಾಪಕ ಹರೀಶ್ ಕುಮಾರ್ ಎಂಬವರು ಬಾಣಾವರ ಠಾಣೆಯಲ್ಲಿ ನೀಡಿದ  ದೂರಿನನ್ವಯ ಆರೋಪಿಗಳ ಪತ್ತೆಗಾಗಿ ಎಎಸ್‌ಪಿ ಡಾ.ಬಿ.ಎನ್.ನಂದಿನಿ ಅವರ ಮೇಲುಸ್ತುವಾರಿಯಲ್ಲಿ ಅರಸೀಕೆರೆ ಡಿವೈಎಸ್ಪಿ ಅಶೋಕ್ ಉಸ್ತುವಾರಿಯಲ್ಲಿ, ಅರಸೀಕೆರೆ ಗ್ರಾಮಾಂತರ ಸಿಪಿಐ ವಸಂತ. ಕೆ.ಎಂ. ಮತ್ತು ಬಾಣಾವರ ಪಿಎಸ್‌ಐ ಅಭಿಜಿತ್ ನೇತೃತ್ವದಲ್ಲಿ 2 ವಿಶೇಷ ತಂಡ  ರಚನೆ ಮಾಡಲಾಗಿತ್ತು.

- Advertisement -

ಈ ತಂಡಗಳು, ಕಳ್ಳರ ಬಗ್ಗೆ ಮಾಹಿತಿ ಸಂಗ್ರಹಿಸಿ ಮೇ 16  ರಂದು ತಿಪಟೂರು ಎಸ್‌ಬಿಐ ಬ್ಯಾಂಕ್ ಬಳಿ ನಿಂತಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕಳವು ಪ್ರಕರಣ ಬಯಲಾಗಿದೆ. ಪ್ರಕರಣದಲ್ಲಿ ಇನ್ನೂ ನಾಲ್ವರನ್ನು ಬಂಧಿಸಬೇಕಿದೆ. ಆರೋಪಿಗಳು ಜನರ ಗಮನ ಬೇರೆಡೆ ಸೆಳೆದು  ಹಣ ದೋಚುತ್ತಿದ್ದರು ಎಂದು ಎಸ್ ಪಿ ತಿಳಿಸಿದರು.

ಬಂಧಿತರು ಜಿಲ್ಲೆಯಲ್ಲಿ ನಡೆದಿರುವ ಒಟ್ಟು 7 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 1 ಪ್ರಕರಣ ಸೇರಿ 8 ಕೃತ್ಯಗಳಲ್ಲಿ ಭಾಗಿಯಾಗಿದ್ದು, ಇವರಿಂದ 27 ಲಕ್ಷ ನಗದು ಹಾಗೂ  ಕೃತ್ಯಕ್ಕೆ ಬಳಸುತ್ತಿದ್ದ ಕ್ಯಾಟರ್‌ಬಿಲ್ ಮತ್ತು ಕಬ್ಬಿಣದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಎಸ್ ಪಿ ಶ್ರೀನಿವಾಸ್‌ಗೌಡಮೆಚ್ಚುಗೆ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಡಾ.ಬಿ.ಎನ್. ನಂದಿನಿ, ಸಿಪಿಐ ವಸಂತ ಕೆ.ಎಂ., ಉಪಸ್ಥಿತರಿದ್ದರು.

Join Whatsapp