ಸಂಪುಟ ವಿಸ್ತರಣೆ ಕುರಿತು ಯಾವುದೇ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

Prasthutha|

►►ರಾಜ್ಯಸಭೆ ಚುನಾವಣೆ ಕುರಿತು ಗೃಹ ಸಚಿವರೊಂದಿಗೆ ಫೋನ್ ನಲ್ಲಿಯೇ ಮಾತುಕತೆ

- Advertisement -

ನವದೆಹಲಿ: ತೀವ್ರ ಚರ್ಚೆಗೆ ಕಾರಣವಾಗಿದ್ದ ರಾಜ್ಯ ಸಚಿವ ಸಂಪುಟ ಪುನಾರಚನೆ ಇನ್ನೂ ಅನಿಶ್ಚಿತವಾಗಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಭೇಟಿ ಸಾಧ್ಯವಾಗಿಲ್ಲ, ರಾಜ್ಯಸಭೆ ಚುನಾವಣೆ ಕುರಿತು ಫೋನ್ ನಲ್ಲಿಯೇ ಮಾತುಕತೆ ನಡೆಸಲಾಗಿದೆ, ಸಂಪುಟದ ಕುರಿತು ಯಾವುದೇ ಚರ್ಚೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಶನಿವಾರ ಸ್ಪಷ್ಟಪಡಿಸಿದ್ದಾರೆ.

- Advertisement -

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಮತ್ತು ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ಕುರಿತು ಅಮಿತ್ ಶಾ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಅವರು ತುರ್ತು ಕೆಲಸದ ಮೇಲೆ ಬೇರೆ ಕಡೆ ಹೋಗಿದ್ದರಿಂದ ಭೇಟಿ ಮಾಡಲು ಆಗಲಿಲ್ಲ. ದೂರವಾಣಿಯಲ್ಲೇ ಸುದೀರ್ಘವಾಗಿ ಮಾತಾನಾಡಿದ್ದೇವೆ. ಸಂಪುಟದ ಕುರಿತು ಯಾವುದೇ ಚರ್ಚೆ ಮಾಡಿಲ್ಲ ಎಂದಿದ್ದಾರೆ.

ಇಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಜೊಡಿ ಮಾತನಾಡಿದ್ದೇನೆ. ಸಂಪುಟ ವಿಸ್ತರಣೆ ಕುರಿತು ಚರ್ಚೆಯಾಗಿಲ್ಲ. ಕೋರ್ ಕಮಿಟಿ ಚರ್ಚೆಯ ವಿಚಾರಗಳು ಮತ್ತು ಪರಿಷತ್ ಹಾಗೂ ರಾಜ್ಯಸಭೆಯ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯ ಕುರಿತು ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.

ಸಂಪುಟ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಇದುವರೆಗೆ ಬಿಬಿಎಂಪಿ ಚುನಾವಣೆ ಬಗ್ಗೆ ಸುಪ್ರೀಂ ಆದೇಶಕ್ಕೆ ಕಾಯುತ್ತಿದ್ದೆವು. ಇದೀಗ ಕೆಲವೇ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಕುರಿತು ಸ್ಪಷ್ಟತೆ ಸಿಗಲಿದೆ. ಹೀಗಾಗಿ ಯಾವುದೇ ಚರ್ಚೆ ನಡೆಸಿಲ್ಲ ಎಂದರು..

ಇದೇ ವೇಳೆ ಮಳೆ ಅವಾಂತರ ಕುರಿತು ಮಾತನಾಡಿದ ಅವರು, ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಎನ್‍ ಡಿಆರ್‌ ಎಫ್ ನಿಧಿಯಲ್ಲಿ ಪರಿಹಾರ ಬಿಡುಗಡೆ ಮಾಡಲಾಗುವುದು. ಪರಿಸ್ಥಿತಿ ಅವಲೋಕಿಸಿ ದಾವೋಸ್ ಪ್ರವಾಸದ ಬಗ್ಗೆ ನಿರ್ಧಾರ ಮಾಡುತ್ತೇನೆಂದರು.

Join Whatsapp