ಬೇಲೂರು: ಜೋರು ಮಳೆಯಿಂದಾಗಿ ಯಗಚಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಐದು ಕ್ರಸ್ಟ್ ಗೇಟ್ ಮೂಲಕ ನದಿಗೆ 2500 ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ.
ಚಿಕ್ಕಮಗಳೂರು, ಮೂಡಿಗೆರೆ ಹಾಗೂ ತಾಲೂಕಿನ ಮಲೆನಾಡು ಭಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಯಗಚಿ ಜಲಾಶಯ ಭರ್ತಿಯಾಗಿದೆ. ಪ್ರಸಕ್ತ ವರ್ಷದಲ್ಲಿ ಜಲಾಶಯ ಭರ್ತಿಯಾಗಿರುವುದು ಇದು 2ನೇ ಬಾರಿಯಾಗಿದೆ. ಈ ಹಿನ್ನೆಲೆ ನದಿಗೆ ನೀರು ಬಿಡಲಾಗಿದ್ದು, ನೀರಿನ ಹರಿವು ನೋಡಲು ಮಳೆಯನ್ನೂ ಲೆಕ್ಕಿಸದೆ ಪ್ರವಾಸಿಗರು ಹಾಗೂ ಪಟ್ಟಣದ ಜನರ ದಂಡೇ ಹರಿದು ಬರುತ್ತಿದೆ.
ಜಲಾಶಯದ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ 3.603 ಟಿಎಂಸಿ ಇದ್ದು, ಗುರುವಾರ 3.300 ಟಿಎಂಸಿ ನೀರಿದೆ. ಜಲಾಶಯಕ್ಕೆ 2500 ಕ್ಯೂಸೆಕ್ ಒಳ ಹರಿವಿದ್ದು, ಅಣೆಯಕಟ್ಟೆಯ ಭದ್ರತೆ ದೃಷ್ಟಿಯಿಂದ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಒಳ ಹರಿವಿನ ಪ್ರಮಾಣ ಹೆಚ್ಚಾದರೆ ಇನ್ನೂ ಹೆಚ್ಚಿನ ನೀರನ್ನು ನದಿಗೆ ಬಿಡಲಾಗುವುದು ಎಂದು ಯಗಚಿ ಯೋಜನಾ ವಿಭಾಗದ ಸಹಾಯಕ ಎಂಜಿನಿಯರ್ ಶಿವಕುಮಾರ್ ತಿಳಿಸಿದರು.
ವಿಪರ್ಯಾಸ ಎಂದರೆ ಯಗಚಿ ಜಲಾಶಯ ಜಿಲ್ಲೆಯ ಮೂರು ಪ್ರಮುಖ( ಹೇಮಾವತಿ, ವಾಟೆಹೊಳೆ) ಜಲಾಶಯಗಳಲ್ಲಿ ಒಂದು. ಆದರೆ ಇಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಜಲಾಶಯ ಭರ್ತಿಯಾದ ಸಂದರ್ಭದಲ್ಲಾದರೂ, ಕನಿಷ್ಠ ಹೂಳು ಎತ್ತುವ ಕಾರ್ಯವನ್ನು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಮಾಡದೇ ಇರುವುದು ಅನೇಕರಲ್ಲಿ ಬೇಸರ ತರಿಸಿದೆ. ನೀರು ಹರಿಯುವ ಜಾಗದಲ್ಲೇ ತ್ಯಾಜ್ಯ ತುಂಬಿಕೊಂಡಿದ್ದು, ಜನರು ಹಾಗೂ ಪ್ರವಾಸಿಗರು ನೀರಿನ ಹರಿಯುವಿಕೆ ನೋಡುವ ಬದಲು ಹಾಸಿಕೊಂಡಿರುವ ಹಸಿರು ತ್ಯಾಜ್ಯವನ್ನು ನೋಡುವಂತಾಗಿದೆ.
ಹೇಮಾವತಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಯಾವುದೇ ಸಂದರ್ಭದಲ್ಲಾದರೂ, ಅಣೆಕಟ್ಟೆಯಿಂದ ನದಿಗೆ ನೀರು ಬಿಡುವ ಸಾಧ್ಯತೆ ಇದೆ ಎಂದು ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ತಿಳಿಸಿದ್ದಾರೆ.
ಹೇಮಾವತಿ ಜಲಾಶಯಕ್ಕೂ ಒಳ ಹರಿವಿನ ಪ್ರಮಾಣ ಏರಿಕೆಯಾಗಿದೆ. ಇಂದು ಜಲಾಶಯಕ್ಕೆ ಬರೋಬ್ಬರಿ 16,660 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ನೀರಿನ ಮಟ್ಟ 2913.60 ಅಡಿಗೇರಿದೆ. 2922 ಅರಿ ಗರಿಷ್ಠ ನೀರಿನ ಮಟ್ಟದ ಜಲಾಶಯ ಭರ್ತಿಗೆ ಕೇವಲ 8.4 ಅಡಿಯಷ್ಟೇ ಬಾಕಿ ಇದೆ. ಕಳೆದ ವರ್ಷ ಇದೇ ದಿನ 2896.10 ಅಡಿ ನೀರಿತ್ತು. ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 37.103 ಟಿಎಂಸಿ ಆಗಿದ್ದು, ಹಾಲಿ 29.512 ಟಿಎಂಸಿ ನೀರಿದೆ. ಕಳೆದ ಸಲ 17.486 ಟಿಎಂಸಿ ನೀರಿತ್ತು. ಚಿಕ್ಕಮಗಳೂರು, ಮೂಡಿಗೆರೆ ಭಾಗಗಳಲ್ಲಿ ಮಳೆ ಮತ್ತಷ್ಟು ಜೋರಾದರೆ ಒಳ ಹರಿವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು, ಯಾವುದೇ ಸಮಯದಲ್ಲಾದರೂ ಹೆಚ್ಚುವರಿ ನೀರನು ಕ್ರಸ್ಟ್ಗೇಟ್ ಮೂಲಕ ನದಿಗೆ ಬಿಡಲಾಗುವುದು. ಹೀಗಾಗಿ ಹೇಮಾವತಿ ನದಿಪಾತ್ರದ ಜನರು, ನದಿದಂಡೆಯಲ್ಲಿ ವಾಸಿಸುತ್ತಿರುವ ಗ್ರಾಮಸ್ಥರು ಮುನ್ನಚ್ಚರಿಕೆ ಕ್ರಮವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.