ಬಾಗಲಕೋಟೆ: ಬಾದಾಮಿ ತಾಲೂಕಿನ ಕಾಡರಕೊಪ್ಪ ಗ್ರಾಮದ ನಿವಾಸಿ ಬೈರಪ್ಪ ಮಾದರ ಕೊಲೆ ಶಂಕೆ ಮತ್ತು ಅಧಿಕಾರಿಗಳ ತನಿಖೆ ವಿಳಂಬದ ವಿರುದ್ಧ ಜಾಂಬವ ಯುವ ಸೇನೆ ರಾಜ್ಯ ಸಮಿತಿ ಹಾಗೂ ದಲಿತ ಒಕ್ಕೂಟದ ವತಿಯಿಂದ ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರಿಗೆ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಕಾರರು ನವನಗರದ ಬಸ್ ನಿಲ್ದಾಣ ಹತ್ತಿರ ಟೈರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು. ಇದರಿಂದ ನವನಗರದ ಬಸ್ ನಿಲ್ದಾಣದಿಂದ ಹೊರಡುವ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು.
ಸ್ಥಳಕ್ಕೆ ಬಾಗಲಕೋಟೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಮಾತುಕತೆ ನಡೆಸಿದರು. ಕೊಲೆ ಮಾಡಿದವರನ್ನು ಮತ್ತು ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಕೂಡಲೇ ಬಂಧಿಸುವಂತೆ ಪ್ರತಿಭಟನಕಾರರು ಪಟ್ಟು ಹಿಡಿದರು.
ಈ ಪ್ರತಿಭಟನೆಯಿಂದ ನವನಗರದ ಬಸ್ ನಿಲ್ದಾಣ ಹಾಗೂ ಎಪಿಎಂಸಿ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.
ಜಾಂಬವ ಯುವ ಸೇನಾ ಸಂಸ್ಥಾಪಕ ಅಧ್ಯಕ್ಷ ರಮೇಶ ಚಕ್ರವರ್ತಿ ಮಾತನಾಡಿ, ಕೆಲಸ ಮಾಡಿದ ಹಣವನ್ನು ಕೊಡುವಂತೆ ರೆಡ್ಡಿ ಸಮುದಾಯದ ಮಹಾಂತೇಶ ತಿಮ್ಮಣ್ಣ ಅವರಲ್ಲಿ ಕೇಳಿದ ಬೈಲಪ್ಪ ಅವರ ಮೇಲೆ ಕೆಲವು ಸವರ್ಣೀಯರು ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದರು. ನಂತರ ಅದೇ ದಿನ ಬೈಲಪ್ಪ ಅವರನ್ನು ಹೊಲಕ್ಕೆ ನೀರು ಹಾಯಿಸಲು ಕರೆದೊಯ್ದಿದ್ದರು. ನಂತರ ಅವರು ಕಾಣೆಯಾಗಿದ್ದಾರೆ ಎಂದು ದೂರಿದರು.
ಈ ಬಗ್ಗೆ ಬೈಲಪ್ಪ ಅವರ ಪತ್ನಿ ಹತ್ತಿರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ ಅಧಿಕಾರಿಗಳು ತನಿಖೆ ನಡೆಸಲು ವಿಳಂಬ ಮಾಡಿದ್ದರಿಂದ ಜಾಂಬವ ಯುವ ಸೇನೆ ರಾಜ್ಯ ಸಮಿತಿ ಹಾಗೂ ಎಲ್ಲಾ ದಲಿತ ಒಕ್ಕೂಟದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಯಿತು ಎಂದು ಅವರು ತಿಳಿಸಿದರು.
ನಂತರ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡು ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲಾಧಿಕಾರಿಗಳು ಪಿ. ಸುನಿಲ್ ಕುಮಾರ್ ಹಾಗೂ ಎಸ್ಪಿ ಜಯಪ್ರಕಾಶ ಅವರ ಭರವಸೆ ಮೇರೆಗೆ ಪ್ರತಿಭಟನಕಾರರು ಧರಣಿಯನ್ನು ಹಿಂಪಡೆದರು.
ವರದಿ: ಸಿದ್ದು ಕಳ್ಳಿಮನಿ