ಹಾಸನ : ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು, ಬೆಳ್ಳಂಬೆಳಿಗ್ಗೆ ಗ್ರಾಮಗಳ ಒಳಗೆ ಒಂಟಿ ಸಲಗಗಳು ಏಕಾಏಕಿ ಪ್ರವೇಶ ಮಾಡಿ ಸಾರ್ವಜನಿಕರನ್ನು ಬೆಚ್ಚಿಬೀಳಿಸುತ್ತಿವೆ.
ಸಕಲೇಶಪುರ ತಾಲ್ಲೂಕಿನ ಕಿರುಹುಣಸೆ ಸರ್ಕಲ್ ಹಾಗೂ ವಡೂರು ಗ್ರಾಮದಲ್ಲಿ ಹಾದು ಹೋದ ಕಾಡಾನೆ ಕಂಡು ಗ್ರಾಮಸ್ಥರು ಭಯಭೀತಿಗೊಂಡಿದ್ದಾರೆ.ಕಾಡಾನೆಯೊಂದು ರಸ್ತೆಯಲ್ಲಿ ದಿಢೀರನೆ ಎದುರು ಬರುತ್ತಿದ್ದಂತೆ ಬೈಕ್ ನಿಲ್ಲಿಸಿ ಸವಾರರೊಬ್ಬರು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ.
ಕಿರುಹುಣಸೆ ಗ್ರಾಮದೊಳಗೆ ಎರಡು ಸಲಗಗಳು ಸಂಚಾರ ಮಾಡುವ ವಿಡಿಯೋ ಇದೀಗ ವೈರಲ್ ಆಗಿದ್ದು, ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಆನೆಗಳು ಯಾವಾಗ ನಮ್ಮ ಮೇಲೆ ದಾಳಿ ಮಾಡುತ್ತವೆಯೋ ಎಂಬ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ.
ಆನೆಗಳ ಉಪಟಳ ಜಾಸ್ತಿಯಾಗುತ್ತಿದಂತೆ ಇಂದು ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಒತ್ತಾಯಿಸಿ ಶಾಸಕ ಎಚ್.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಸಕಲೇಶಪುರ ತಾಲ್ಲೂಕಿನ ಬಾಗೆ ಗ್ರಾಮದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಇನ್ನೊಂದೆಡೆ ಕಾಡಾನೆಗಳ ಇರುವ ಮಾಹಿತಿ ಕುರಿತು ಅರಣ್ಯ ಇಲಾಖೆ ಸಿಬ್ಬಂದಿ ಮೈಕ್ ಮೂಲಕ ಅನೌನ್ಸ್ ಮಾಡುತ್ತಿದ್ದು, ಜನರಿಗೆ ಹೊರ ಬಾರದಂತೆ ಸೂಚನೆ ನೀಡಲಾಗಿದೆ. ಮಠಸಾಗರ, ಟಾಟಾ ಎಸ್ಟೇಟ್ ಬಳಿ ಕಾಡಾನೆಗಳಿದ್ದು ಜನರು ಸುರಕ್ಷಿತವಾಗಿ ಹಾಗೂ ಎಚ್ಚರಿಕೆಯಿಂದ ಓಡಾಡುವಂತೆ ಧ್ವನಿವರ್ಧಕದ ಮೂಲಕ ಮನವಿ ಮಾಡಲಾಗುತ್ತಿದೆ.