ಹಾಸನ: ಮುಂದಿನ ಸೆ.14 ರಂದು ದಸಂಸ ರಾಜ್ಯ ಸಮ್ಮೇಳನ ಹಾಗೂ ನೂತನ ರಾಜಕೀಯ ಪಕ್ಷ ಸ್ಥಾಪನೆ ಕಾರ್ಯಕ್ರಮವನ್ನು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ. ಎನ್ ಮೂರ್ತಿ ಹೇಳಿದರು
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿ, ಕಳೆದ ಮೂರು ವರ್ಷಗಳಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಹೊಸ ರಾಜಕೀಯ ಪಕ್ಷ ಕಟ್ಟಲು ಮುಂದಾಗಿದ್ದು ದಲಿತರ ಹಿತ ರಕ್ಷಣೆ ನೂತನ ಪಕ್ಷದ ಉದ್ದೇಶ ಎಂದರು.
ಕೇಂದ್ರ ಸರಕಾರ ಎಸ್‌ಇಪಿಟಿಎಸ್ ಯೋಜನೆಗಳಿಗೆ ಹಣ ಮೀಸಲು ಇಟ್ಟು ಅವರ ಕ್ಷೇಮಾವೃದ್ಧಿಗೆ ಮುಂದಾಗಬೇಕು, ನಿರುದ್ಯೋಗ ನಿವಾರಣೆ ಬಗ್ಗೆ ಸರಕಾರ ಕ್ರಮ ವಹಿಸದೇ ಇರುವುದು ಖಂಡನೀಯ. ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.
ಸ್ವಾತಂತ್ರ್ಯ ನಂತರ ದೇಶವನ್ನು ಆಳುತ್ತಿರುವ ವಿವಿಧ ಪಕ್ಷಗಳು ದಲಿತರ ಹಿತ ರಕ್ಷಣೆ ಕಾಯುವಲ್ಲಿ ವಿಫಲವಾಗಿವೆ, ಸ್ವತಂತ್ರ ಸಿಕ್ಕಿ 75 ವರ್ಷ ಕಳೆದರೂ ದಲಿತರ ಮೇಲೆ ಹಲ್ಲೆ, ಆಕ್ರಮಣಗಳು ನಡೆಯುತ್ತಲೇ ಇವೆ. ದಲಿತರ ಹಿತ ಕಾಯುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.
ದಲಿತರ ಸಮಸ್ಯೆಗಳಿಗೆ ಪರಿಹಾರೋಪಾಯವಾಗಿ ನೂತನ ಪಕ್ಷಯ ಅಸ್ತಿತ್ವಕ್ಕೆ ಬರುತ್ತಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ಪಕ್ಷ ಕೆಲಸ ಮಾಡಲಿದೆ. ಎಲ್ಲರೂ ಪಕ್ಷವನ್ನು ಅಧಿಕಾರಕ್ಕೆ ತಂದು ರಾಜ್ಯದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು
ಧರ್ಮಯ್ಯ, ವೆಂಕಣ್ಣ, ರೇಣುಕಾನಂದ, ಕುಮಾರ್‌ಸ್ವಾಮಿ, ಕೋದಂಡರಾಮ, ಬೈಲ ಹೊನ್ನಯ್ಯ ಇದ್ದರು.