ಲಕ್ನೋ: ಕೇದಾರನಾಥ ದೇಗುಲದಿಂದ ಪ್ರಧಾನಿ ಮೋದಿ ಅವರ ನೇರ ಪ್ರಸಾರವನ್ನು ವೀಕ್ಷಿಸಲು ಹರ್ಯಾಣದ ದೇವಸ್ಥಾನಕ್ಕೆ ತೆರಳಿದ್ದ ಕೇಂದ್ರ ಮಾಜಿ ಸಚಿವ ಮನೀಶ್ ಗ್ರೋವರ್ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಪ್ರತಿಭಟನಾಕಾರರು ಸುತ್ತುವರಿದು, ಸುಮಾರು 6 ಗಂಟೆಗಳ ಕಾಲ ಒತ್ತೆಯಾಳಾಗಿ ಹಿಡಿದಿಟ್ಟಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ರೈತರ ವಿರುದ್ಧ ಆಕ್ಷೇಪಾರ್ಹ ಪದಬಳಕೆಯ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಗ್ರೋವರ್ ಕ್ಷಮೆಯಾಚಿಸಬೇಕು ಎಂದು ರೈತರ ಪರ ಪ್ರತಿಭಟನಾಕಾರರು ಒತ್ತಾಯಿಸಿದರು. ಇದಕ್ಕಾಗಿ ಅರ್ಧ ಗಂಟೆ ಕಾಲಾವಕಾಶವನ್ನು ನೀಡಿದ್ದಾರೆ.
ವಿವಿಧ ಪ್ರದೇಶಗಳಿಂದ ಆಗಮಿಸಿದ ರೈತರು ದೇವಸ್ಥಾನವನ್ನು ಸುತ್ತುವರಿದು ಬಿಜೆಪಿ ನಾಯಕರಾದ ರವೀಂದ್ರ ರಾಜು, ಮೇಯರ್ ಮನಮೋಹನ್ ಗೋಯಲ್, ಬಿಜೆಪಿ ಜಿಲ್ಲಾಧ್ಯಕ್ಷ ಅಜಯ್ ಬನ್ಸಾಲ್, ಸತೀಶ್ ನಂದಲ್ ಎಂಬವರನ್ನು ದಿಗ್ಬಂಧನಕ್ಕೊಳಪಡಿಸಿದರು.
ದೆಹಲಿ – ಹಿಸಾರ್ ರಾಷ್ಟ್ರೀಯ ಹೆದ್ದಾರಿಯನ್ನು ಕೆಲ ಹೊತ್ತು ತಡೆಹಿಡಿಯಲಾಗಿತ್ತು. ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕಳೆದ ಒಂದು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.