ಹರ್ಯಾಣದಲ್ಲಿ 150 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹೇರಿದ ಜಾಟ್ ಸಮುದಾಯ

Prasthutha|

ಗುರ್ಗಾಂವ್: ಹರ್ಯಾಣದ ಜಿಂದ್ ಉಚನಾ ಉಪವಿಭಾಗದಲ್ಲಿರುವ ಛತ್ತರ್ ನಲ್ಲಿ ದಲಿತ ಸಮುದಾಯಕ್ಕೆ ಸೇರಿದ 150 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸರಪಂಚ್ ಸೇರಿದಂತೆ 23 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

- Advertisement -

ಮಾತ್ರವಲ್ಲ ಈ ಎಲ್ಲಾ ಕುಟುಂಬಗಳ ರೇಷನ್, ಔಷಧಿ ಮತ್ತು ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಾಟ್ ಸಮುದಾಯದ ಮೇಲಿನ ಪ್ರಕರಣವನ್ನು ಹಿಂಪಡೆಯಲು ಒತ್ತಡ ಹೇರುವ ನಿಟ್ಟಿನಲ್ಲಿ ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ ಎಂದು ದಲಿತರು ಆರೋಪಿಸಿದ್ದಾರೆ.

ವಾರಗಳ ಹಿಂದೆ ಕಬಡ್ಡಿ ಪಂದ್ಯಾಟಕ್ಕೆ ಸಂಬಂಧಿಸಿದಂತೆ ದಲಿತ ಯುವಕ ಗುರ್ಮೀತ್ ಎಂಬಾತನಿಗೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿದೆ. ಗುರ್ಮೀತ್ ನೀಡಿದ ದೂರಿನನ್ವಯ ಎಸ್.ಸಿ/ ಎಸ್.ಟಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಜಾಟ್ ಸಮುದಾಯದ ಕೆಲವು ಯುವಕರನ್ನು ಬಂಧಿಸಲಾಗಿತ್ತು.

- Advertisement -

ಪ್ರಸಕ್ತ ಪ್ರಕರಣವನ್ನು ಹಿಂಪಡೆಯುವಂತೆ ಪಂಚಾಯತ್ ಸದಸ್ಯರ ಮೂಲಕ ಮೇಲ್ಜಾತಿಯವರು ಗುರ್ಮೀತ್ ಮೇಲೆ ನಿರಂತರ ಒತ್ತಡ ಹೇರುತ್ತಿದ್ದರು.

ಪ್ರಕರಣ ಹಿಂಪಡೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ದಲಿತ ಸಮುದಾಯದ ವಿರುದ್ಧ ಸಾಮಾಜಿಕ ಮತ್ತು ಜಾತಿ ಆಧಾರಿತ ಬಹಿಷ್ಕಾರಕ್ಕೆ ಒಳಪಡಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಕಚೇರಿಗೆ ದೂರು ಸಲ್ಲಿಸಲಾಗಿದೆ.

ಮಾತ್ರವಲ್ಲ ಸಾಮಾಜಿಕ ಬಹಿಷ್ಕಾರದ ಭಾಗವಾಗಿ ದಲಿತರಿಗೆ ಪಡಿತರ, ತರಕಾರಿ, ಹಾಲು, ಔಷದ ಪೂರೈಸುವ, ವ್ಯವಹರಿಸುವವರಿಗೆ 11 ಸಾವಿರ ರೂ. ದಂಡ ವಿಧಿಸುವುದಾಗಿ ಪಂಚಾಯತ್ ಸುತ್ತೋಲೆ ಹೊರಡಿಸಿದೆ. ಅದೇ ರೀತಿ ದಲಿತರ ಪ್ರಯಾಣಕ್ಕೆ ನಿಷೇಧ ಹೇರಲಾಗಿದೆ ಎಂದು ದಲಿತ ಮುಖಂಡರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Join Whatsapp