ಮಂಗಳೂರು: ನಾವೆಲ್ಲಾ ಹಿಂದೂ ಎನ್ನುವ, ಹಿಂದೂಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ, ಹಿಂದೂಗಳನ್ನು ಗುತ್ತಿಗೆಗೆ ಪಡೆದಂತೆ ವರ್ತಿಸುವ ಬಿಜೆಪಿಯು ಈಗ ದೇವಾಲಯದ ನಿರ್ನಾಮ ಕಾರ್ಯದಲ್ಲಿ ತೊಡಗಿದೆ. ಇದು ಅನೈತಿಕ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ದಾರೆ.
ಇಲ್ಲಿನ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ 150ಕ್ಕೂ ಹೆಚ್ಚು ದೇವಾಲಯಗಳನ್ನು ಗುರುತು ಮಾಡಿದ್ದು, ಈಗಾಗಲೇ 12 ಆಲಯಗಳನ್ನು ಕೆಡವಿ ದೇವರ ಮೂರ್ತಿಗಳನ್ನು ಫುಟ್ ಪಾತಿಗೆ ಎಸೆಯಲಾಗಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶ ಇದ್ದರೂ ಇದು ಧಾರ್ಮಿಕ ವಿಷಯವಾದುದರಿಂದ ನ್ಯಾಯಾಲಯಕ್ಕೆ ವಿಷಯ ಮನವರಿಕೆ ಮಾಡಬೇಕಿತ್ತು. ಜಿಲ್ಲಾಧಿಕಾರಿ, ತಹಶೀಲ್ದಾರರ ಹೆಸರು ಹೇಳಿ ಏನು ಫಲ? ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯ ಸರಕಾರಗಳೇ ಇರುವಾಗ ಅಧಿಕಾರಿಗಳು ಅದನ್ನು ಮೀರಿ ದೇವಾಲಯ ಒಡೆಯುವುದಿಲ್ಲ ಎಂದು ಹೇಳಿದರು.
ಇನ್ನೊಂದು ಕಡೆ ಈ ಬಿಜೆಪಿ ಪರ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ನಾಟಕ ಏಕೆ? ಒಡೆಯುವವರೇ ಪ್ರತಿಭಟನೆ ಮಾಡುವ ನಾಟಕವನ್ನು ಜನರು ನಂಬುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹ 920 ಅಕ್ರಮ ಆಲಯಗಳನ್ನು ಕೆಡವಲು ಗುರುತು ಆಗಿದೆ. ಇವುಗಳಲ್ಲಿ 201 ಮಸೀದಿಗಳು, 79 ಇಗರ್ಜಿಗಳೂ ಇವೆ. ಈಗಾಗಲೇ ಕೆಲವನ್ನು ಗುಟ್ಟಿನಲ್ಲಿ ಕೆಡವಲಾಗಿದೆ ಎಂದು ಹರೀಶ್ ಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸದಾಶಿವ ಉಳ್ಳಾಲ್, ವಿಶ್ವಾಸ್ ದಾಸ್, ನೀರಜ್ ಪಾಲ್, ಪ್ರಕಾಶ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು