ಮಂಗಳೂರು : ಬಿಜೆಪಿಯವರು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕುವ ಧೈರ್ಯ ತೋರಿಸುವುದು ಬೇಡ. ಬ್ರಿಟಿಷರಿಗೆ ಗುಲಾಮರಾದವರಿಂದ ನಾವು ಕಲಿಯಬೇಕಾದಂತದ್ದಿಲ್ಲ. ಬ್ರಿಟಿಷರ ಚಾಲೆಂಜ್‌ಗೇ ನಾವು ಭಯ ಪಡದವರು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿ ಇತ್ತೀಚೆಗೆ ಬಿಜೆಪಿ ನಾಯಕರ ಹೇಳಿಕೆಯೊಂದರ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಪ್ರತಿಭಟನೆ ಮಾಡುತ್ತಾರೆಂದರೆ ಅದಕ್ಕೆ ವಿರುದ್ಧವಾಗಿ ನೂರು ಪಟ್ಟು ಹೆಚ್ಚಾಗಿ ಮಾಡುವ ಶಕ್ತಿ ನಮಗಿದೆ ಎಂದರು.
ಬಿಜೆಪಿಯವರ ಸವಾಲು, ಪ್ರತಿಭಟನೆಗಳು ಉತ್ತರ ಕುಮಾರನ ಪೌರುಷ ಒಲೆಯ ಮುಂದೆ ಎಂಬ ರೀತಿಯಲ್ಲಿ. ಅವರೂ ಈ ವಿಷಯದಲ್ಲಿ ಪ್ರತಿಭಟನೆ ನಡೆಸುತ್ತಾರೆಂದರೆ ತಪ್ಪನ್ನು ಒಪ್ಪಿಕೊಂಡ ಹಾಗಾಗಿದೆ ಎಂದು ಅವರು ಹೇಳಿದರು.
ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿಯನ್ನು ವಿಶ್ವಗುರು ಮಾಡುವ ಆತುರದಲ್ಲಿ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ದಾರ್ಶನಿಕರು, ಸಾಹಿತಿಗಳು, ಸ್ವಾತಂತ್ರ ಹೋರಾಟಗಾರರನ್ನು ಅವಮಾನ ಮಾಡುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದ ಅವರು, ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ನಿರಾಕರಣೆ ಮಾಡುವ ಮೂಲಕ ಅವಮಾನ ಮಾಡಿದ್ದಾರೆ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶಾಸಕ ಯು.ಟಿ.ಖಾದರ್, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಮೊಯ್ದಿನ್ ಬಾವಾ, ಐವನ್ ಡಿಸೋಜಾ, ಇಬ್ರಾಹೀಂ ಕೋಡಿಜಾಲ್, ಶಶಿಧರ ಹೆಗ್ಡೆ, ವಿಶ್ವಾಸ್ ಕುಮಾರ್ ದಾಸ್, ಬಿ. ಇಬ್ರಾಹೀಂ, ಪುರುಷೋತ್ತ ಚಿತ್ರಾಪುರ, ಗಣೇಶ್ ಪೂಜಾರಿ, ಚಿತ್ತರಂಜನ್, ಲುಕ್ಮಾನ್ ಬಂಟ್ವಾಳ, ರಕ್ಷಿತ್ ಮೊದಲಾದವರು ಉಪಸ್ಥಿತರಿದ್ದರು.