ದ್ವೇಷ ಭಾಷಣ ಪ್ರಕರಣ: ಯತಿ ನರಸಿಂಗಾನಂದ ಜಾಮೀನು ಅರ್ಜಿ ತಿರಸ್ಕೃತ

Prasthutha|

ನವದೆಹಲಿ: ಹರಿದ್ವಾರದಲ್ಲಿ ನಡೆದಿದ್ದ ವಿವಾದಾತ್ಮಕ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಮುಸ್ಲಿಮರ ಹತ್ಯಾಕಾಂಡಕ್ಕೆ ಕರೆ ನೀಡಿ ಬಂಧನಕ್ಕೆ ಒಳಗಾಗಿರುವ ಧಾರ್ಮಿಕ ಮುಖಂಡ ಯತಿ ನರಸಿಂಗಾನಂದ ಜಾಮೀನು ಅರ್ಜಿಯನ್ನು ಹರಿದ್ವಾರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತಿರಸ್ಕರಿಸಿದೆ.

- Advertisement -

ಇದಕ್ಕೂ ಮುನ್ನ ಹರಿದ್ವಾರದ ಸಿಜೆಎಂ ಮುಖೇಶ್ ಚಂದ್ರ ಆರ್ಯ ಅವರು ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಜಿತೇಂದ್ರ ನಾರಾಯಣ ತ್ಯಾಗಿಯ ಜಾಮೀನು ಅರ್ಜಿಯನ್ನು ರದ್ದುಗೊಳಿಸಿದ್ದರು. ತ್ಯಾಗಿ ಕೂಡ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.

ಡಿಸೆಂಬರ್’ನಲ್ಲಿ ನಡೆದಿದ್ದ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ದ್ವೇಷಪೂರಿತ ಭಾಷಣ ಮಾಡಿದ್ದ ಯತಿ ನರಸಿಂಗಾನಂದರನ್ನು ಕಳೆದ ಶನಿವಾರ ಬಂಧಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಆರೋಪಿ ವಿರುದ್ಧ ಸೆಕ್ಷನ್ 295 (ಧಾರ್ಮಿಕ ಭಾವನೆಯನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು), 509 (ಯಾವುದೇ ಮಹಿಳೆಯನ್ನು ಅವಮಾನಿಸುವ ಉದ್ದೇಶ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಅವಮಾನ) ಮತ್ತು 153A (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

ಮುಸ್ಲಿಮರ ಹತ್ಯಾಕಾಂಡ ಮತ್ತು ಅವರ ವಿರುದ್ಧ ಶಸ್ತ್ರಾಸ್ತ್ರಗಳ ಬಳಕೆಗೆ ಕರೆ ನೀಡಿದ್ದ ಯತಿ ನರಸಿಂಗಾನಂದ, ಜಿತೇಂದ್ರ ಸಿಂಗ್ ನಾರಾಯಣ್ ತ್ಯಾಗಿ ಮತ್ತು ಅನ್ನಪೂರ್ಣ ಸೇರಿದಂತೆ 10 ಕ್ಕೂ ಹೆಚ್ಚು ಜನರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳ ಕುರಿತು 10 ದಿನಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಉತ್ತರಾಖಂಡ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದ ನಂತರ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು.



Join Whatsapp