ಶಾಲೆಯ ಹೊಸ್ತಿಲನ್ನೂ ಮೆಟ್ಟಿದ ಮತಾಂಧತೆಯ ನೆರಳು ಸಮಾಜದ ಗರ್ಭದಲ್ಲೇ ಮೊಳಕೆಯೊಡೆಯುವ ದ್ವೇಷಕ್ಕೆ ಶಾಲಾಮಕ್ಕಳು ವಾಹಕಗಳೇ?

Prasthutha|

ಮನುಜ ಪ್ರೀತಿ, ಸಹಿಷ್ಣುತೆ, ಸಂಯಮ ಮತ್ತು ಸಂವೇದನೆ ಇವೆಲ್ಲವೂ ಸಮಾಜದ ಗರ್ಭದಲ್ಲೇ ಮೊಳಕೆಯೊಡೆಯುವಂತಹ ಉದಾತ್ತ ಅಭಿವ್ಯಕ್ತಿ ಧಾರೆಗಳು. ಮಾನವ ಸಮಾಜದ ಅಭ್ಯುದಯದ ಹಾದಿಯಲ್ಲಿ ಶತಮಾನಗಳ ಕಾಲದ ದ್ವೇಷಾಸೂಯೆಗಳ ಹೊರತಾಗಿಯೂ ಇಂದಿಗೂ ಮಾನವೀಯ ಮೌಲ್ಯದ ನೆಲೆಗಳು, ಶಿಥಿಲಾವಸ್ಥೆಯಲ್ಲಾದರೂ ಉಳಿದುಕೊಂಡು ಬಂದಿರುವುದು ಈ ಧಾರೆಗಳ ಮುಖಾಂತರವೇ. ಇತಿಹಾಸದುದ್ದಕ್ಕೂ ನಡೆದಿರುವ ನೂರಾರು ಘೋರ ಯುದ್ಧಗಳ ಹೊರತಾಗಿಯೂ, ಹಿಂಸಾತ್ಮಕ ಆಳ್ವಿಕೆಯ ಹೊರತಾಗಿಯೂ ಇಂದಿಗೂ ಯುದ್ಧ ವಿರೋಧಿ ಮನಸುಗಳು, ಶಾಂತಿಪ್ರಿಯ ಹೃದಯಗಳು ಜೀವಂತಿಕೆಯಿಂದಿವೆ ಎಂದಾದರೆ ಅದಕ್ಕೆ ಕಾರಣವೇ ಈ ಮುಖ್ಯ ಧಾರೆಗಳು. ಶಾಂತಿ ಬಯಸುವವರಲ್ಲಿರುವ ಮನುಜ ಪ್ರೀತಿಯನ್ನು ದೇಶ ವಿರೋಧಿ ಎಂತಲೋ, ಪ್ರಭುತ್ವ ಭಂಜಕ ಎಂತಲೋ ಭಾವಿಸುವ ಒಂದು ಪರಂಪರೆಯ ನಡುವೆಯೇ ಈ ಧಾರೆಗಳು ಪ್ರವಹಿಸುತ್ತಾ ಬಂದಿವೆ.

- Advertisement -

ಭೌಗೋಳಿಕ ರಾಷ್ಟ್ರಗಳ ಪರಿಕಲ್ಪನೆ ಮತ್ತು ಇದರಿಂದಲೇ ಉದ್ಭವಿಸುವ ರಾಷ್ಟ್ರ ರಾಷ್ಟ್ರೀಯತೆಯ ಪರಿಕಲ್ಪನೆಗಳು ಭೂ ಖಂಡವನ್ನು ವಿಭಜಿಸುತ್ತಲೇ ಬಂದಿದೆಯಲ್ಲದೆ ಭೌಗೋಳಿಕ ಗಡಿ ರಕ್ಷಣೆಗಾಗಿ ಲಕ್ಷಾಂತರ ಅಮಾಯಕ ಜೀವಗಳನ್ನೂ ಬಲಿಪಡೆದಿದೆ. ಇಂದಿಗೂ ಈ ಭೌಗೋಳಿಕ ವ್ಯಾಪ್ತಿಯನ್ನು ಹಿಗ್ಗಿಸುವ ಅಧಿಕಾರಸ್ಥರ ಹಪಹಪಿಯೇ ಜೀವ ಹರಣದ ಕೂಪಗಳಾಗಿ ಎಲ್ಲ ದೇಶಗಳನ್ನೂ ಕಾಡುತ್ತಿದೆ. ಇದಕ್ಕೆ ಪ್ರತಿಯಾಗಿ ವಿಶ್ವ ಇತಿಹಾಸದಲ್ಲಿ ಮಾನವ ಪ್ರೇಮಿ ಮನಸುಗಳೂ ಸಕ್ರಿಯವಾಗಿವೆ. ದೇಶಭಾಷೆಗಳ ಎಲ್ಲೆಗಳನ್ನು ಮೀರಿ ಮನುಷ್ಯರನ್ನು ಮನುಷ್ಯರನ್ನಾಗಿ ಮಾತ್ರವೇ ಕಾಣುವ ಮನಸುಗಳಿಗೆ ಚೈತನ್ಯ ತುಂಬುವ ದಾರ್ಶನಿಕರು ಶತಮಾನಗಳಿಂದಲೂ ಉದಯಿಸಿ ಮರೆಯಾಗಿದ್ದಾರೆ. ಈ ದಾರ್ಶನಿಕರು ತೋರಿದ ಹಾದಿಯಲ್ಲೇ ನಡೆಯುವುದಾದರೆ ಬಹುಶಃ ಇಡೀ ವಿಶ್ವವೇ ಸರ್ವ ಜನಾಂಗದ ಶಾಂತಿಯ ತೋಟ ಎನಿಸಿಕೊಳ್ಳಬಹುದು.

ಆದರೆ ನಾವೇ ಸೃಷ್ಟಿಸಿಕೊಂಡಿರುವ ಜಾತಿ, ಮತ, ಧರ್ಮ, ಭಾಷೆ ಮತ್ತು ಭೌಗೋಳಿಕ ರಾಷ್ಟ್ರಪ್ರೇಮ ಈ ತೋಟಗಳಿಗೆ ಮುಳ್ಳು ಬೇಲಿಗಳನ್ನು ಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿವೆ. ಭಾರತದಲ್ಲಿ ವೈದಿಕಶಾಹಿ ಮೂಲದ ಜಾತಿಯ ನೆಲೆಗಳು ಮನುಷ್ಯನನ್ನು ನಿಕೃಷ್ಟವಾಗಿ ಕಾಣುವ ಶ್ರೇಷ್ಠತೆಯ ಮೇಲರಿಮೆಯ ಪರಿಕಲ್ಪನೆಗಳನ್ನು ಉತ್ತೇಜಿಸುತ್ತಾ ಬಂದಿದ್ದರೆ, ಇದೇ ಪರಂಪರೆಯಲ್ಲೇ ಬೆಳೆದುಬಂದಿರುವ ಧಾರ್ಮಿಕ ಚಿಂತನೆಗಳು ಮತ್ತು ಮತಾಧಾರಿತ ಧೋರಣೆಗಳು ಜನಸಮುದಾಯಗಳ ನಡುವೆ ಗೋಡೆಗಳನ್ನು ಕಟ್ಟುತ್ತಲೇ ಬಂದಿವೆ. ಜನಾಂಗಗಳನ್ನು, ಜನಸಮುದಾಯಗಳನ್ನು ತಮ್ಮ ಲಕ್ಷ್ಮಣ ರೇಖೆಗಳ ಮೂಲಕ ವಿಭಜಿಸಲು ಸದಾ ಉತ್ಸುಕವಾಗಿರುವ ಮತಗಳು ಮತ್ತು ಧಾರ್ಮಿಕ ನೆಲೆಗಳು ಮನಸುಗಳ ನಡುವೆಯೇ ಬೇಲಿಗಳನ್ನು ನಿರ್ಮಿಸಲು ತಮ್ಮದೇ ಆದ ಸಾಧನಗಳನ್ನು,ಅಸ್ತ್ರಗಳನ್ನು ಸೃಷ್ಟಿಸಿಕೊಂಡಿವೆ.

- Advertisement -

ಕೋಮುವಾದ ಇಂತಹ ಒಂದು ಸಾಧನವಾದರೆ, ಮತಾಂಧತೆ ಈ ಮಾರ್ಗದ ಯಶಸ್ಸಿಗೆ ಪರಿಣಾಮಕಾರಿ ಎನಿಸುವ ಅಸ್ತ್ರವಾಗಿ ಪರಿಣಮಿಸುತ್ತದೆ. ಭಾರತದ ಸಂದರ್ಭದಲ್ಲಿ ಜಾತಿ ವ್ಯವಸ್ಥೆ ಈ ವಿಘಟನೆಯ ಆಸ್ಪತ್ರೆಗಳಿಗೆ ಪೂರಕವಾಗಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡುಬರುತ್ತದೆ. ಭಾರತವನ್ನು ಶತಮಾನಕ್ಕೂ ಹೆಚ್ಚು ಕಾಲದಿಂದ ಕಾಡುತ್ತಿರುವ ಕೋಮುವಾದವನ್ನು ಹಿಂದೂ,ಮುಸ್ಲಿಂ ಅಥವಾ ಮತ್ತಾವುದೇ ಮತೀಯ ನೆಲೆಯಲ್ಲಿ ಕಾಣುವುದಕ್ಕಿಂತಲೂ ಹೆಚ್ಚಾಗಿ ಈ ಕೋಮುವಾದದ ನೆಲೆಗಳು ಬಳಸಿಕೊಳ್ಳುವ ಸಾಮಾನ್ಯ ಜನರ ಮನಸ್ಥಿತಿಯ ನೆಲೆಯಲ್ಲಿ ಕಾಣಲೆತ್ನಿಸಿದಾಗ,ಈ ಸೌಹಾರ್ದ ಭಂಜಕ ಅಸ್ತ್ರಗಳನ್ನು ವಸ್ತುನಿಷ್ಠವಾಗಿ ಕಾಣುವುದೂ ಸಾಧ್ಯ. ಶತಮಾನದ ಹಿಂದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿನ ಐಕ್ಯತೆಯ ದನಿಯ ನಡುವೆ ಕಾಣಿಸಿಕೊಂಡ ಕೋಮುವಾದದ ವಿಷಬೀಜ ಸಂಸದೀಯ ಪ್ರಜಾಪ್ರಭುತ್ವದ ಎಲ್ಲ ಹಾದಿಗಳನ್ನೂ ಆವರಿಸಿಕೊಂಡು ಇದೀಗ ಎಳೆಯ ಮಕ್ಕಳ ಶಾಲೆಯ ಹೊಸ್ತಿಲಲ್ಲಿ ಬಂದು ನಿಂತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಹಿಂದೂ ಮತ್ತು ಮುಸ್ಲಿಂ ಮತದ ಪ್ರತಿಪಾದಕರು, ಪರಿಚಾರಕರು ಮತ್ತು ಪ್ರಚಾರಕರು ತಮ್ಮೊಳಗಿನ ಕೋಮುವಾದದ ವಿಷಬೀಜಗಳನ್ನು ಮೊಳೆಯುವ ಮುನ್ನವೇ ಕಿತ್ತೊಗೆದಿದ್ದರೆ ಮತಾಂಧತೆಯ ನೆರಳು ಶಾಲೆಯ ಹೊಸ್ತಿಲನ್ನು ತಲುಪುತ್ತಿರಲಿಲ್ಲ. ಸಮಾಜದ ಗರ್ಭದಲ್ಲೇ ಉದಯಿಸುವ ಈ ವೀಷ ಬೀಜಗಳಿಗೆ ಸಾಂಸ್ಕೃತಿಕ ನೀರೆರೆದು, ರಾಜಕೀಯ ಗೊಬ್ಬರ ಹಾಕಿ ಹೆಮ್ಮರವಾಗಿ ಬೆಳೆಸಿದ ಕೋಮುವಾದಿ ಮತಾಂಧ ಶಕ್ತಿಗಳ ಸೌಹಾರ್ದಭಂಜಕ ಪ್ರವೃತ್ತಿಗೆ ಇಂದು ಮಕ್ಕಳು ಬಲಿಯಾಗುವ ಸಂದರ್ಭ ಎದುರಾಗಿದೆ. ಉಡುಪಿಯ ಸರ್ಕಾರಿ ಕಾಲೇಜೊಂದರಲ್ಲಿ ಹಿಜಾಬ್ ಧರಿಸಿದ ಹೆಣ್ಣುಮಕ್ಕಳಿಗೆ ಪ್ರವೇಶ ನಿರಾಕರಿಸುವ ಮೂಲಕ ಕಾಲೇಜಿನ ಆಡಳಿತ ಮಂಡಲಿ ಶಾಲಾ ಮಕ್ಕಳ ನಡುವೆಯೂ ಧಾರ್ಮಿಕ ಚಿಹ್ನೆಗಳನ್ನು ಗುರುತಿಸುವ ಹೊಸ ಪರಂಪರೆಗೆ ನಾಂದಿ ಹಾಡಿದೆ. ಹಿಜಾಬ್ ಧರಿಸುವುದು ಇಸ್ಲಾಂ ಮತದ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. 

ಯಾವುದೇ ಒಂದು ಮತಕ್ಕೆ ಸೇರಿದವರಿಗೆ ತಮ್ಮ ಅಸ್ಮಿತೆಗಳನ್ನು ಕಾಪಾಡಿಕೊಳ್ಳಲು ಒಂದು ಚಿಹ್ನೆ ಇದ್ದೇ ಇರುತ್ತದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಮತ್ತು ಸಿಖ್ ಧರ್ಮಗಳನ್ನು ಅನುಸರಿಸುವವರು ಈ ಚಿಹ್ನೆಗಳ ಮೂಲಕವೇ ತಮ್ಮ ಮತೀಯ ಅಸ್ಮಿತೆಯನ್ನು ಪ್ರತಿಪಾದಿಸುತ್ತಾರೆ. ಆದರೆ ಈ ಚಿಹ್ನೆಯನ್ನು ಪ್ರಾತಿನಿಧಿಕವಾಗಿ ಬಳಸದೆ ಇರುವವರನ್ನು ಬಹಿಷ್ಕೃತರನ್ನಾಗಿ ಕಾಣುವ ಮನಸ್ಥಿತಿ ಮತಾಂಧತೆಗೆ ಕಾರಣವಾಗುತ್ತದೆ. ಮುಸಲ್ಮಾನರಲ್ಲಿ ಮತ್ತು ಹಿಂದುತ್ವದ ನೆರಳಲ್ಲಿ ಹಿಂದೂಗಳಲ್ಲೂ ಈ ಧೋರಣೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದನ್ನು ಗಮನಿಸಬಹುದು.

ಈ ಹೆಚ್ಚಳಕ್ಕೆ ಕಾರಣಗಳೂ ಇಲ್ಲದಿಲ್ಲ. ಹಿಂದುತ್ವವಾದಿಗಳ ಆಕ್ರಮಣಕಾರಿ ಮತೀಯವಾದಕ್ಕೆ ಪ್ರತಿಯಾಗಿ ತಮ್ಮ ಮತೀಯ ಅಸ್ಮಿತೆಯನ್ನು ಗುರುತಿಸಿಕೊಂಡು, ಸಂರಕ್ಷಿಸುವ ಸಲುವಾಗಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಈ ಧಾರ್ಮಿಕ ಚಿಹ್ನೆಗಳು ಗುರಾಣಿಯಾಗಿ ಬಳಕೆಯಾಗಬಹುದು. ಅಲ್ಪಸಂಖ್ಯಾತ ಸಮುದಾಯಗಳು ಈ ಚಿಹ್ನೆಗಳ ಮೂಲಕವೇ ತಮ್ಮ ಧರ್ಮನಿಷ್ಠೆಯನ್ನು, ಮತೀಯ ಅಸ್ಮಿತೆಯನ್ನು ಪ್ರತಿಪಾದಿಸಬೇಕಾದ ಅನಿವಾರ್ಯತೆಯನ್ನು ಹಿಂದುತ್ವದ ಕಾಲಾಳುಗಳು ಸೃಷ್ಟಿಸಿರುವುದೂ ವಾಸ್ತವ. ಒಂದು ಹಿಜಾಬ್, ಒಂದು ಬಿಳಿ ಟೊಪ್ಪಿ ಅಥವಾ ದಾಡಿ ವ್ಯಕ್ತಿಗತ ನೆಲೆಯ ನಂಬಿಕೆ ಮತ್ತು ಬದ್ಧತೆಯನ್ನಾಧರಿಸಿರುತ್ತವೆ. ಈ ಚಿಹ್ನೆಗಳನ್ನು ಧರಿಸಲು ಧಿಕ್ಕರಿಸುವ ಅಥವಾ ನಿರಾಕರಿಸುವ ವ್ಯಕ್ತಿಗಳ ನಿಷ್ಠೆಯನ್ನು ಪ್ರಶ್ನಿಸುವುದು ಮತ್ತು ಧರಿಸುವಂತೆ ಒತ್ತಡ ಹೇರುವುದು ಮತೀಯ ನೆಲೆಗಳನ್ನು ಮತ್ತಷ್ಟು ಸಂಕುಚಿತಗೊಳಿಸುವ, ಸಂಕೀರ್ಣಗೊಳಿಸುವ ಪ್ರಕ್ರಿಯೆಯಾಗುತ್ತದೆ.

ಒಂದು ಜಾತ್ಯತೀತ ವಾತಾವರಣದಲ್ಲಿ ಪ್ರತಿಯೊಂದು ಮತದಲ್ಲೂ ಧಾರ್ಮಿಕ ಆಚರಣೆಗಳಿಗೆ ಇರುವ ವ್ಯಕ್ತಿ ಸ್ವಾತಂತ್ರ್ಯವೇ ಸಮಾಜದ ಸೌಹಾರ್ದತೆಯನ್ನು ವೃದ್ಧಿಸುವ ಪ್ರಮುಖ ಅಸ್ತ್ರವಾಗಿ ಪರಿಣಮಿಸುತ್ತದೆ. ಹಿಂದೂಗಳಲ್ಲಿ ಈ ರೀತಿಯ ಕಟ್ಟಳೆಗಳಿಲ್ಲ ಎಂದು ಎದೆಯುಬ್ಬಿಸುವ ಮುನ್ನ ಯೋಚಿಸಬೇಕಾದ ಅಂಶವೆಂದರೆ, ಹಿಂದೂ ಎನ್ನುವುದು ಒಂದು ಸಾಂಸ್ಥಿಕ ಮತ ಅಲ್ಲ. ಅದು ನೂರಾರು ಜಾತಿಗಳ ಒಂದು ಕೂಟ. ಇಲ್ಲಿಯೂ ವೈದಿಕ ಪರಂಪರೆಯಿಂದ ಬಳುವಳಿಯಾಗಿ ಪಡೆದ ಹಲವಾರು ಧಾರ್ಮಿಕ ಚಿಹ್ನೆಗಳು, ಆಚರಣೆಗಳು ಜನಜೀವನದಲ್ಲಿ ಹಾಸುಹೊಕ್ಕಾಗಿವೆ. ಆದರೆ ವೈವಿಧ್ಯಮಯ ಸಾಂಸ್ಕೃತಿಕ ನೆಲೆಗಳನ್ನು ಹೊಂದಿರುವುದರಿಂದ ಸಾಂಸ್ಥಿಕ ಕಟ್ಟಳೆಗಳನ್ನು ವಿಧಿಸಲಾಗುವುದಿಲ್ಲ. ಈ ಕೊರತೆಯನ್ನು ನೀಗಿಸಿ, ಹಿಂದೂಧರ್ಮ ದ ಅಸ್ಮಿತೆಯೊಂದನ್ನು ಸೃಷ್ಟಿಸಲು ಯತ್ನಿಸುತ್ತಿರುವ ಹಿಂದುತ್ವ ಪ್ರತಿಪಾದಕರು ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಬೈತಲೆಯಿಂದ ಕಾಲುಂಗುರದವರೆಗೆ ಧಾರ್ಮಿಕ ಚಿಹ್ನೆಗಳನ್ನು ಆರೋಪಿಸಲು ಯತ್ನಿಸುತ್ತಿದ್ದಾರೆ.

ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಸಂಗತಿ ಎಂದರೆ ಎರಡೂ ಮತಾಚರಣೆಗಳ ಸಂದರ್ಭದಲ್ಲಿ ಹೆಣ್ಣು ಮಕ್ಕಳು, ಮಹಿಳೆಯರೇ ಗುರಿಯಾಗುತ್ತಾರೆ. ಮುಸ್ಲಿಂ ಹೆಣ್ಣು ಮಕ್ಕಳನ್ನು ಹಿಜಾಬ್ ಧರಿಸಿದ ಕಾರಣಕ್ಕೆ ಬಹಿಷ್ಕರಿಸುವ ಶಾಲೆಯಲ್ಲಿ ಮುಸ್ಲಿಂ ಗಂಡು ಮಕ್ಕಳಲ್ಲಿ ಯಾವ ಚಿಹ್ನೆಯನ್ನು ಅರಸಲು ಸಾಧ್ಯ? ಹತ್ತು ಹನ್ನೆರಡು ವಯೋಮಾನದ ಹುಡುಗರಿಗೆ ದಾಡಿಯೂ ಬೆಳೆದಿರುವುದಿಲ್ಲ, ಆಧುನಿಕ ಬದುಕಿಗೆ ಒಡ್ಡಿಕೊಂಡಿರುವ ಈ ಪೀಳಿಗೆಯ ಬಾಲಕರು ಬಿಳಿ ಟೊಪ್ಪಿಯನ್ನೂ ಧರಿಸುವುದಿಲ್ಲ. ಮತ್ತೊಂದು ಮಜಲಿನಿಂದ ನೋಡಿದರೆ ಹೆಣ್ಣು ಮಕ್ಕಳಿಗೆ ಹಿಜಾಬ್ ಕಡ್ಡಾಯ ಮಾಡುವ ಮುಸ್ಲಿಂ ಮೌಲ್ವಿಗಳು ಅಥವಾ ಮತಾಚರಣೆಯ ನಿರ್ವಾಹಕರು ಗಂಡು ಮಕ್ಕಳ ಮೇಲೆ ಇದೇ ರೀತಿಯ ಒತ್ತಡ ಹೇರಲು ಸಾಧ್ಯವೇ? ಇದೇ ತಾರತಮ್ಯವನ್ನು ಹಿಂದೂಗಳಲ್ಲೂ ಗಮನಿಸಬಹುದು. ಹೆಣ್ಣುಮಕ್ಕಳ ಹಣೆ ಕುಂಕುಮ, ಮುಡಿದ ಹೂವು, ಉಟ್ಟ ಸೀರೆ ಇತ್ಯಾದಿಗಳನ್ನು ತಮ್ಮ ಪರಂಪರೆ ಮತ್ತು ಸಂಸ್ಕೃತಿಯೊಡನೆ ಗುರುತಿಸುವ ಮತ ವಾರಸುದಾರರು, ಗಂಡು ಮಕ್ಕಳಲ್ಲಿ, ಪುರುಷರಲ್ಲಿ ಏನನ್ನು ಗುರುತಿಸಲು ಸಾಧ್ಯ? ಅಥವಾ ಏನನ್ನು ಹೇರಲು ಸಾಧ್ಯ?

ಇಲ್ಲಿ ನಮ್ಮ ಸಮಾಜದಲ್ಲಿ ಬೇರೂರಿರುವ ಪಿತೃಪ್ರಧಾನ ಧೋರಣೆ ಮತ್ತು ಎಲ್ಲ ಮತಗಳಲ್ಲೂ ಇರುವ ಸ್ತ್ರೀ ಕೇಂದ್ರಿತ ಸಾಂಸ್ಕೃತಿಕ ವ್ಯಾಖ್ಯಾನಗಳು ಮುನ್ನೆಲೆಗೆ ಬರುತ್ತವೆ. ಲಿಂಗಾಧಾರಿತ ಮಾನ್ಯತೆಯನ್ನು ನೀಡುವ ಸೋಗಿನಲ್ಲೇ ಲಿಂಗಾಧಾರಿತ ಶೋಷಣೆ ಸದ್ದಿಲ್ಲದೆ ನಡೆಯುತ್ತಿರುವುದಕ್ಕೆ ಹಿಜಾಬ್ ವಿವಾದದಂತಹ ಘಟನೆಗಳು ಸಾಕ್ಷಿಯನ್ನೊದಗಿಸುತ್ತವೆ. ಯಾವುದೇ ಮತದ ಧಾರ್ಮಿಕ ಆಚರಣೆಗಳನ್ನು ಅನುಸರಿಸುವುದಕ್ಕೆ ಸಾಂವಿಧಾನಿಕ ಹಕ್ಕು ನೀಡಲಾಗಿದೆಯಾದರೂ, ಈ ಹಕ್ಕುಗಳನ್ನು ಚಲಾಯಿಸುವಾಗ ಅಥವಾ ಹೇರುವಾಗ ವ್ಯಕ್ತಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಮನ್ನಣೆ ನೀಡಬೇಕಾಗಿರುವುದು ಪ್ರಜಾತಾಂತ್ರಿಕ ಮೌಲ್ಯದ ಲಕ್ಷಣ. ಭಾರತದ ಸಂವಿಧಾನವನ್ನು ಮೂಲತಃ ವ್ಯಕ್ತಿ ಸ್ವಾತಂತ್ರ್ಯದ ನೆಲೆಯಲ್ಲೇ ರಚಿಸಲಾಗಿದ್ದು, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳೂ ಸಹ ಈ ನೆಲೆಯಲ್ಲೇ ನಿಷ್ಕರ್ಷೆಗೊಳಪಡಬೇಕಾಗುತ್ತದೆ.

ರಾಜಕೀಯ ಅಧಿಕಾರಕ್ಕಾಗಿ, ಸಾಮಾಜಿಕ ವಾರಸುದಾರಿಕೆಗಾಗಿ ಮತ್ತು ಸಾಂಸ್ಕೃತಿಕ ಆಧಿಪತ್ಯಕ್ಕಾಗಿ ವಿಭಿನ್ನ ಮತಗಳ ವಾರಸುದಾರರೊಡನೆ ನಡೆಯುವ ಸಂಘರ್ಷದಲ್ಲಿ ಮುಖ್ಯವಾಗಿ ಕಾಣುವುದು ಇದೇ ಮೂಲಭೂತವಾದದ ನೆರಳು. ತಮ್ಮ ಮತ ಅಥವಾ ಧರ್ಮವೇ ಶ್ರೇಷ್ಠ ಎನ್ನುವ ಮೇಲರಿಮೆ ಮತ್ತು ಅಹಮಿಕೆಯ ಜೊತೆಗೇ ಪೂರಕವಾಗಿ ಅನ್ಯ ಮತ ಮತ್ತು ಧರ್ಮದ ಬಗ್ಗೆ ಅಸಡ್ಡೆ, ಅಸೂಯೆ, ದ್ವೇಷವನ್ನು ಬೆಳೆಸುವ ಒಂದು ಪ್ರವೃತ್ತಿ ಶತಮಾನಗಳಿಂದಲೂ ಬೆಳೆಯುತ್ತಲೇ ಬಂದಿದೆ. ಕಳೆದ ಮೂರು ನಾಲ್ಕು ದಶಕಗಳ ಸಾಂಸ್ಕೃತಿಕ ವಾತಾವರಣದಲ್ಲಿ ಈ ಪ್ರವತ್ತಿ ಇನ್ನೂ ಆಳಕ್ಕಿಳಿಯುತ್ತಿದೆ. ಅನ್ಯ ಮತ ದ್ವೇಷವನ್ನೇ ರಾಜಕೀಯ ಅಸ್ತ್ರವನ್ನಾಗಿ ಬಳಸುವ ಮೂಲಕ ಹಿಂದುತ್ವದ ಕಾಲಾಳುಗಳು ಎಲ್ಲ ರೀತಿಯ ಅನ್ಯ ಧಾರ್ಮಿಕ ಆಚರಣೆಗಳ ಮೇಲೆ ದಾಳಿ ನಡೆಸುತ್ತಿರುವುದು ಈ ಪರಂಪರೆಯ ವಿಸ್ತರಣೆಯೇ ಆಗಿದೆ. ಈ ದಾಳಿಗೆ ಪ್ರತಿದಾಳಿ ರೂಪಿಸುವ ಸಂದರ್ಭದಲ್ಲಿ ಅಲ್ಪಸಂಖ್ಯಾತರಲ್ಲಿ ವಿಧ್ವಂಸಕ ಮಾರ್ಗಗಳನ್ನರಸುವ ಯುವ ಪೀಳಿಗೆಯೂ ಹೆಚ್ಚಾಗುತ್ತಿದೆ.

ಅಲ್ಪಸಂಖ್ಯಾತ ಸಮುದಾಯಗಳು ಈ ದಾಳಿಗಳಿಗೆ ಪ್ರತಿಯಾಗಿ ಸಮಾಜದ ಗರ್ಭದಲ್ಲೇ ಇರುವ ಪ್ರತಿರೋಧದ ನೆಲೆಗಳನ್ನು ಹೆಚ್ಚು ಹೆಚ್ಚಾಗಿ ಬಳಸಿಕೊಳ್ಳುವ ಮೂಲಕ ಮೂಲಭೂತವಾದ ಮತ್ತು ಮತಾಂಧತೆಯನ್ನು ಹಿಮ್ಮೆಟ್ಟಿಸುವುದು ಔಚಿತ್ಯಪೂರ್ಣ. ಆದರೆ ಕಳೆದ ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣದ ವಾತಾವರಣದಲ್ಲಿ ಮುಸ್ಲಿಂ ಸಮುದಾಯದ ಧಾರ್ಮಿಕ ನಾಯಕರು ತಮ್ಮ ವಾರಸುದಾರಿಕೆಯನ್ನು ಈ ದಿಕ್ಕಿನಲ್ಲಿ ಕೊಂಡೊಯ್ಯಲು ವಿಫಲರಾಗುತ್ತಿದ್ದಾರೆ. ಧಾರ್ಮಿಕ ಆಚರಣೆ ಮತ್ತು ಚಿಹ್ನೆಗಳನ್ನೂ ಮೀರಿದ ಅಲ್ಪಸಂಖ್ಯಾತ ಸಮುದಾಯದ ಬೃಹತ್ ಜನಸ್ತೋಮ ಇಂದು ಭಾರತೀಯ ಸಮಾಜದ ಅವಿಭಾಜ್ಯ ಅಂಗವಾಗಿ ಬದುಕುತ್ತಿದೆಯಲ್ಲವೇ? ಈ ಸಮುದಾಯಗಳೂ ಹಿಂದುತ್ವ ಮತಾಂಧರಿಂದ ದಾಳಿಗೊಳಗಾಗುತ್ತಿವೆ. ಪ್ರಾರ್ಥನೆಯ ನೆಲೆಗಳೂ ಸಹ ಇಂತಹ ಮತಾಂಧರ ಆಕ್ರಮಣಕ್ಕೆ ತುತ್ತಾಗುತ್ತಿವೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮತ್ತಾವುದೋ ರೂಪದ ಧಾರ್ಮಿಕ ಚಿಹ್ನೆಗಳು ಅಥವಾ ಆಚರಣೆಗಳಿಗಿಂತಲೂ, ಸಮಾಜದ ಬಹುಸಂಖ್ಯಾತರು ಪ್ರತಿನಿಧಿಸುವ ಜಾತ್ಯತೀತ ಪರಂಪರೆಗಳೊಡನೆ ಗುರುತಿಸಿಕೊಳ್ಳುವುದರಿಂದ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಹೆಚ್ಚಿನ ಆತ್ಮಸ್ಥೈರ್ಯವನ್ನು ತುಂಬುವುದು ಸಾಧ್ಯ. ಈ ನಿಟ್ಟಿನಲ್ಲಿ ಈ ಸಮುದಾಯಗಳ ಯುವ ಪೀಳಿಗೆಯಲ್ಲೂ ವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಗೌರವ ಮತ್ತು ಮನ್ನಣೆ ದೊರೆಯಬೇಕಿದೆ. ಮತಾಚರಣೆ ಅಥವಾ ಧಾರ್ಮಿಕ ಚಿಹ್ನೆಗಳನ್ನು ನಿರಾಕರಿಸದೆಯೂ, ವ್ಯಕ್ತಿಗತ ನೆಲೆಯಲ್ಲಿ ತಮ್ಮದೇ ಆದ ಅಭಿವ್ಯಕ್ತಿಯ ಮಾರ್ಗಗಳನ್ನನುಸರಿಸಲು ಅವಕಾಶಗಳನ್ನು ಕಲ್ಪಿಸಬೇಕಾಗುತ್ತದೆ. ಮತೀಯ ಅಸ್ಮಿತೆ ಮತ್ತು ಧಾರ್ಮಿಕ ಆಚರಣೆಗಳ ನಡುವೆ ಒಂದು ತೆಳುವಾದ ರೇಖೆ ಸದಾ ಜೀವಂತವಾಗಿದ್ದಲ್ಲಿ ಮಾತ್ರವೇ ಯಾವುದೇ ಒಂದು ಸಮುದಾಯ ತನ್ನ ಔನ್ನತ್ಯವನ್ನು ಉಳಿಸಿಕೊಂಡಿರಲು ಸಾಧ್ಯ. ಮುಸ್ಲಿಂ ನೇತಾರರು ಮತ್ತು ಧಾರ್ಮಿಕ ನಾಯಕರು ಈ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಈ ದಾಳಿಗಳನ್ನು ವಿರೋಧಿಸುವ ಸಂದರ್ಭದಲ್ಲಿ ಸಮಾಜದಲ್ಲಿ ಬಹುಸಂಖ್ಯೆಯಲ್ಲಿರುವ ಪ್ರಗತಿಪರ ಪ್ರತಿರೋಧದ ನೆಲೆಗಳು ನೆರವಾಗುತ್ತವೆ. ಅಲ್ಪಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಧಾರ್ಮಿಕ ನಾಯಕರು ಈ ಜಾತ್ಯತೀತ ನೆಲೆಗಳನ್ನು ಹೆಚ್ಚು ಹೆಚ್ಚಾಗಿ ಬಳಸಿಕೊಳ್ಳಬೇಕಿದೆ. ಇದೇ ವೇಳೆ ತಮ್ಮ ಮತದಲ್ಲಿ ಆಂತರಿಕವಾಗಿ, ತಮ್ಮ ಸ್ವಇಚ್ಛೆಯಿಂದಲೇ ಧಾರ್ಮಿಕ ಚಿಹ್ನೆಗಳನ್ನು ಬಳಸುವ ಹಾಗೂ ಆಚರಣೆಗಳನ್ನು ಅನುಸರಿಸುವ ಹಕ್ಕು ಪ್ರತಿಯೊಬ್ಬ ವ್ಯಕ್ತಿಗೂ, ವಿಶೇಷವಾಗಿ ಮಹಿಳೆಗೂ ನೀಡಬೇಕಾಗುತ್ತದೆ. ಹಾಗೆಯೇ ಈ ಚಿಹ್ನೆಗಳನ್ನು ಹೇರುವ ಅಧಿಕಾರ ಯಾವುದೇ ಮತದ ವಾರಸುದಾರರಿಗಾಗಲೀ, ಧಾರ್ಮಿಕ ನಾಯಕರಿಗಾಗಲೀ ಇರುವುದಿಲ್ಲ ಎನ್ನುವುದನ್ನೂ ಮನಗಾಣಬೇಕಿದೆ. ಅಸ್ಮಿತೆ ಮತ್ತು ಅಚರಣೆಯ ನಡುವಿನ ತೆಳುಗೆರೆಯನ್ನು ಅಳಿಸಿಹಾಕದಿರುವುದೂ ಒಂದು ಮಾರ್ಗ ಎನಿಸಬಹುದು. ಈ ಒಂದು ಪ್ರಜಾಸತ್ತಾತ್ಮಕ ಧೋರಣೆಯನ್ನು ಅಳವಡಿಸಿಕೊಳ್ಳುವುದು, ಸಾಮಾಜಿಕ ಸ್ವಾಸ್ಥ್ಯ ಬಯಸುವ ಪ್ರತಿಯೊಬ್ಬರ ಆದ್ಯತೆಯಾಗಬೇಕಿದೆ.

ಹಿಂದೂ ಅಥವಾ ಮುಸ್ಲಿಂ ಮತಾಂಧತೆಯನ್ನು ವ್ಯಕ್ತಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ಮೌಲ್ಯಗಳ ನೆಲೆಗಟ್ಟಿನಲ್ಲೇ ಎದುರಿಸುವುದು ಇಂದಿನ ಆವಶ್ಯಕತೆ ಆಗಿದೆ.ಚುನಾವಣಾ ಕ್ಷೇತ್ರದಿಂದ ಸಂಸದೀಯ ಶಾಸನ ಸಭೆಗಳನ್ನು ಆಕ್ರಮಿಸಿರುವ ಮತಾಂಧತೆಯ ನೆರಳು ಶಾಲೆಯ ಅವರಣವನ್ನೂ ಆವರಿಸುತ್ತಿರುವ ಅಪಾಯವನ್ನು ಮನಗಂಡು, ಜಾತ್ಯತೀತ ಮನಸುಗಳು ಒಂದಾಗಬೇಕಿದೆ. ಶಾಲಾ ಮಕ್ಕಳಲ್ಲಿ ಮತೀಯ ಭಾವನೆಗಳ, ಧಾರ್ಮಿಕ ಆಚರಣೆಗಳ ಮೂಲಕ ಪ್ರತ್ಯೇಕತೆಯ ಭಾವವನ್ನು ಮೂಡಿಸುವ ಮತಾಂಧರ ಪ್ರಯತ್ನಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಮಾನತೆ ಭ್ರಾತೃತ್ವ ಮತ್ತು ಸೌಹಾರ್ದತೆಯ ಸಾಂವಿಧಾನಿಕ ಮೌಲ್ಯಗಳು ನಮ್ಮ ಪ್ರತಿರೋಧದ ಅಸ್ತ್ರಗಳಾದರೆ ಸರ್ವ ಜನಾಂಗದ ಶಾಂತಿಯ ತೋಟ ನಳನಳಿಸಲು ಸಾಧ್ಯ.

Join Whatsapp