ಮಂಗಳೂರು: ವಿಟ್ಲ ಸಮೀಪದ ಬೈರಿಕಟ್ಟೆಯ ಯುವಕ ಸಾಬಿತ್ ಎಂಬವರು ಪವಿತ್ರ ಮಕ್ಕಾ ಯಾತ್ರೆ ಹಾಗೂ ಈಜಿಪ್ಟ್ ನಲ್ಲಿ ಉನ್ನತ ಧಾರ್ಮಿಕ ವಿಧ್ಯಾಭ್ಯಾಸ ಪಡೆಯಲು 10 ದೇಶಗಳನ್ನೊಳಗೊಂಡ 15,000 ಕಿ.ಮೀ. ಕ್ರಮಿಸುವ ಸೈಕಲ್ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ. ಅಕ್ಟೋಬರ್ 20 ರಂದು ಕೇರಳದ ತಿರುವನಂತಪುರದಿಂದ ಯಾತ್ರೆ ಹೊರಡಲಿದ್ದಾರೆ.
ಕನಸುಗಾರ ಯುವಕ ಹಾಫಿಲ್ ಅಹ್ಮದ್ ಸಾಬಿತ್ ಅವರು ಈಗಾಗಲೇ ಕೇರಳವನ್ನು ಸೈಕಲ್ ನಲ್ಲಿ ಸುತ್ತಿ ಅನುಭವ ಪಡೆದವರು. ಮದೀನಾ ಮತ್ತು ಈಜಿಪ್ತಿನ ವಿಶ್ವವಿದ್ಯಾನಿಲಯಕ್ಕೆ ಸೈಕಲ್ ಮೂಲಕ 15,000 ಕಿಲೋಮೀಟರ್ ದೂರ ಸಂಚರಿಸಿ ಭೇಟಿ ನೀಡಲಿದ್ದಾರೆ.
ಅಕ್ಟೋಬರ್ 19ರಂದು ಕನ್ಯಾಕುಮಾರಿ ತಿರುವನಂತಪುರದಿಂದ ಹೊರಡುವ ಕರ್ನಾಟಕ, ಗೋವಾ, ಮಹಾರಾಷ್ಟ್ರ, ರಾಜಸ್ತಾನ, ಹರಿಯಾಣ, ಪಂಜಾಬ್, ಜಮ್ಮು ಕಾಶ್ಮೀರ, ಲಡಾಖ್ ಸಾಗಿ ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್, ಯುಎಇ, ಸೌದಿ ಮದೀನಾ ತಲುಪುವ ಉದ್ದೇಶ ಹೊಂದಿದ್ದೇನೆ. ಅಲ್ಲಿಂದ ಆಫ್ರಿಕಾ ಖಂಡದ ಈಜಿಪ್ತ್ ಕೈರೋಗೆ ಹೋಗುತ್ತೇನೆ. ಅಲ್ಲಿ ಎರಡು ವರ್ಷಗಳ ಕಾಲ ಹೆಚ್ಚಿನ ವಿದ್ಯಾಭ್ಯಾಸ ಮಾಡುವು ಗುರಿ ಹೊಂದ್ದಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿಂದು ಸಾಬಿತ್ ತಿಳಿಸಿದರು.
ವಿಟ್ಲ ಬೈರಕಟ್ಟೆಯ ಅಬ್ದುಲ್ ರಹಮಾನ್ ಮಸ್ಲಿಯಾರ್ ಮತ್ತು ಹವ್ವಾರ ಪುತ್ರ ಸಾಬಿತ್ ಅವರು ಕುರ್ ಆನ್ ಕಂಠಪಾಠ ಮತ್ತು ಉಪನ್ಯಾಸ ನೀಡುವುದರಲ್ಲಿ ಈಗಾಗಲೇ ಸಾಧನೆ ಮಾಡಿದ್ದಾರೆ. ಇವರು ಇನ್ ಸ್ಟಾಗ್ರಾಮ್ ನಲ್ಲಿ 60,000ಕ್ಕೂ ಹೆಚ್ಚು ಮಂದಿ ಫಾಲೋವರ್ ಗಳನ್ನು ಹೊಂದಿದ್ದಾರೆ. ಅತ್ಯಂತ ಕಿರಿಯ ತರಬೇತುದಾರನಾಗಿ ಇಂಡಿಯಾ ಬುಕ್ ರೆಕಾರ್ಡ್ ಮಾಡಿದ್ದಾರೆ.
ರಶೀದ್ ವಿಟ್ಲ ಯುವಕನನ್ನು ಪರಿಚಯಿಸಿದರು. ಸಾಬಿತ್ ಅವರು ಕೈರೋದಲ್ಲಿ ಹದೀಸ್ ಧಾರ್ಮಿಕ ಶಿಕ್ಷಣ ಉನ್ನತ ಪದವಿ ಎರಡು ವರ್ಷ ಕಲಿಯಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಬೂಬಕರ್, ಮುಹಮ್ಮದ್ ಸಾದಿಕ್ ಮೊದಲಾದವರು ಉಪಸ್ಥಿತರಿದ್ದರು.