ಬೆಂಗಳೂರು: ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ, ಪದಕ ವಿಜೇತರಿಗೆ ಸರ್ಕಾರಿ ಉದ್ಯೋಗ ಕೊಡಿ ಎಂದು ಕೇಳಿದ ಕನ್ನಡಿಗ ಕ್ರೀಡಾಪಟು ಗುರುರಾಜ್ ಪೂಜಾರಿಯವರನ್ನು ಅವಮಾನಿಸುವ ರೀತಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ವಿಜೇತರಿಗೆ ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಘಟನೆ ನಡೆದಿದೆ.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಕಡಿಮೆ ಎಂದು ಗುರುರಾಜ್ ಪೂಜಾರಿ ಹೇಳಿದ್ದರು. ಆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಒಬ್ಬ ಕ್ರೀಡಾಪಟುವಾಗಿ ದೇಶಕ್ಕೆ, ರಾಜ್ಯಕ್ಕೆ ನಿಮ್ಮ ಕೊಡುಗೆ ಏನು ಎಂಬುದನ್ನು ಕೇಳಿಕೊಳ್ಳಿ. ಸರ್ಕಾರ ಏನು ಮಾಡಬೇಕೆಂದು ಹೇಳುವ ಮುನ್ನ ನೀವೇನು ಮಾಡಬೇಕೆಂದು ಮೊದಲು ತೀರ್ಮಾನ ಮಾಡಿ. ನೌಕರಿಗಾಗಿ ಕ್ರೀಡೆಯನ್ನು ಆಡುವುದಲ್ಲ. ದೇಶಕ್ಕಾಗಿ ಆಡಿ, ಪದಕವನ್ನು ಗೆಲ್ಲಬೇಕು. ಮೊದಲು ಆಟವಾಡುವುದನ್ನು ಕಲಿಯಿರಿ ಎಂದು ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ.
ಗುರುರಾಜ್ ಪೂಜಾರಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ʻಕರ್ನಾಟಕದ ಕ್ರೀಡಾಪಟುಗಳಿಗೆ ಮತ್ತಷ್ಟು ಬೆಂಬಲ ಸಿಕ್ಕರೆ ಇನ್ನೂ ಹೆಚ್ಚು ಪದಕ ಗೆಲ್ಲಲು ನೆರವಾಗುತ್ತದೆ. ಕಾಮನ್ ವೆಲ್ತ್ ಗೇಮ್ಸ್’ನಲ್ಲಿ ಭಾರತದ ಕ್ರೀಡಾಪಟುಗಳು ಒಟ್ಟು 61 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ ಕರ್ನಾಟಕದ ಮೂವರು ಕ್ರೀಡಾಪಟುಗಳು ಪದಕ ಗೆದ್ದಿದ್ದಾರೆ. ಪದಕ ವಿಜೇತರಿಗೆ ಬೇರೆ ರಾಜ್ಯಗಳಲ್ಲಿ ಹೆಚ್ಚಿನ ಪ್ರೋತ್ಸಾಹ ಧನ ಘೋಷಣೆ ಮಾಡಲಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿನ ಪ್ರೋತ್ಸಾಹ ಧನ ಕಡಿಮೆ. ಇನ್ನೂ ಹೆಚ್ಚಿನ ಪ್ರೋತ್ಸಾಹ ಧನ ಸಿಕ್ಕರೆ ಕರ್ನಾಟಕದ ಕ್ರೀಡಾಪಟುಗಳು ಮತ್ತಷ್ಟು ಪದಕಗಳನ್ನು ಗಳಿಸುತ್ತಾರೆ. ಕ್ರೀಡಾಪದಕ ವಿಜೇತರಿಗೆ ಸರ್ಕಾರಿ ಉದ್ಯೋಗ ಕೂಡ ನೀಡಬೇಕೆಂದು ಮನವಿ ಮಾಡಿದ್ದರು.
ಬರ್ಮಿಂಗ್’ಹ್ಯಾಮ್’ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್’ನಲ್ಲಿ ಕನ್ನಡಿಗ ಗುರುರಾಜ್ ಪೂಜಾರಿ ಕಂಚಿನ ಪದಕ ಗೆಲ್ಲುವ ರಾಜ್ಯಕ್ಕೆ ಕೀರ್ತಿ ತಂದಿದ್ದರು. ಪುರುಷರ ವೇಟ್ ಲಿಫ್ಟಿಂಗ್’ನ 61 ಕೆಜಿ ವಿಭಾಗದಲ್ಲಿ ಒಟ್ಟು 269 ಕೆಜಿ ಭಾರ ಎತ್ತುವಲ್ಲಿ ಗುರುರಾಜ್ ಸಫಲರಾಗಿದ್ದರು. ಗೋಲ್ಡ್’ಕೋಸ್ಟ್’ನಲ್ಲಿ ನಡೆದಿದ್ದ ಕಳೆದ ಆವೃತ್ತಿಯಲ್ಲಿ 56 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಗುರುರಾಜ ಪೂಜಾರಿ, ಬೆಳ್ಳಿ ಪದಕ ಗೆದ್ದಿದ್ದರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮ ಜೆಡ್ಡು ಮೂಲದವರಾದ ಗುರುರಾಜ್ ಪೂಜಾರಿ, ಮಹಾಬಲ ಪೂಜಾರಿ ಮತ್ತು ಪದ್ದು ಪೂಜಾರಿ ದಂಪತಿಗಳ ಪುತ್ರ. ವಾಯುಸೇನೆಯಲ್ಲಿ ಉದ್ಯೋಗಿಯಾಗಿದ್ದಾರೆ.