ಬೆಂಗಳೂರು: ಕರ್ನಾಟಕ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ಚೊಚ್ಚಲ ಮಹಾರಾಜ ಟಿ20 ಟೂರ್ನಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮನೀಶ್ ಪಾಂಡೆ ನೇತೃತ್ವದ ಗುಲ್ಬರ್ಗಾ, ಬೆಂಗಳೂರು ಬ್ಲಾಸ್ಟರ್ಸ್ ತಂಡದ ವಿರುದ್ಧ 11 ರನ್ ಅಂತರದಲ್ಲಿ ರೋಚಕ ಗೆಲುವು ಸಾಧಿಸಿ, ಚೊಚ್ಚಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಗುಲ್ಬರ್ಗಾ ಮಿಸ್ಟಿಕ್ಸ್, ದೇವದತ್ ಪಡಿಕ್ಕಲ್ ಗಳಿಸಿದ ಆಕರ್ಷಕ ಅರ್ಧಶತಕ (56 ರನ್) ಮತ್ತು ಶ್ರೀಜಿತ್ ಗಳಿಸಿದ 38 ರನ್‌ಗಳ ನೆರವಿನೊಂದಿಗೆ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟದಲ್ಲಿ 220 ರನ್‌ಗಳಿಸಿತ್ತು. ಗುರಿ ಬೆನ್ನತ್ತಲು ಬೆಂಗಳೂರು ಬ್ಲಾಸ್ಟರ್ಸ್ ಕಠಿಣ ಹೋರಾಟ ನಡೆಸಿತರಾದರೂ 9 ವಿಕೆಟ್ ನಷ್ಟದಲ್ಲಿ 209 ರನ್‌ಗಳಿಷಲಷ್ಟೇ ಶಕ್ತರಾದರು.
ಬ್ಲಾಸ್ಟರ್ಸ್ ಪರ ಏಕಾಂಗಿ ಹೋರಾಟ ನಡೆಸಿದ ಆರಂಭಿಕ ಎಲ್ ಆರ್ ಚೇತನ್ (91 ರನ್) ಮತ್ತು ಕ್ರಾಂತಿ ಕುಮಾರ್ 47 ರನ್‌ಗಳಿಸಿದರು. 21 ಎಸೆತದಲ್ಲಿ ಅರ್ಧಶತಕ ಪೂರೈಸಿ ಚೇತನ್ ಅಬ್ಬರಿಸಿದರು. ನಾಯಕ ಮಯಾಂಕ್ ಅಗರ್‌ವಾಲ್ 16 ರನ್‌ಗಳಿಸಿದ್ದ ವೇಳೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭಿವಸಿದರು. ರಿತೇಶ್ ಭಟ್ಕಳ್ ಮತ್ತು ಪ್ರಣವ್ ಭಾಟಿಯಾ ದಾಳಿಗೆ ಬೆಂಗಳೂರು ಬ್ಲಾಸ್ಟರ್ಸ್ ಬ್ಯಾಟ್ಸ್‌ಮನ್‌ಗಳು ನಿರುತ್ತರಾದರು.
ಬೆಂಗಳೂರು ಗೆಲುವಿಗೆ ಅಂತಿಮ 6 ಎಸೆತದಲ್ಲಿ 21 ರನ್ ಅಗತ್ಯವಿತ್ತು. ರೋನಿತ್ ಮೋರೆ ಹೋರಾಟ ನಡೆಸಿದರಾದರೂ ಗೆಲುವು ಸಾಧ್ಯವಾಗಲಿಲ್ಲ.