ಪ್ರಧಾನಿ ಇನ್ನಷ್ಟು ಮೊರ್ಬಿ ಮಾದರಿ ಸೇತುವೆ ಉದ್ಘಾಟಿಸಲಿ ಎಂದು ಗುಜರಾತ್ ಚುನಾವಣೆ ಮುಂದೂಡಲಾಗುತ್ತಿದೆ: ಖರ್ಗೆ

Prasthutha|

ನವದೆಹಲಿ: ಐದೇ ದಿನದಲ್ಲಿ ಕುಸಿದು ಬೀಳುವಂತಹ ಸೇತುವೆ ಉದ್ಘಾಟಿಸುವುದರಲ್ಲಿ ಗುಜರಾತಿನವರು ಪ್ರಸಿದ್ಧರು. ಗುಜರಾತ್ ಚುನಾವಣೆಯನ್ನು ಏಕೆ ಮುಂದೂಡಲಾಗುತ್ತಿದೆಯೆಂದರೆ ಪ್ರಧಾನಿ ಮೋದಿಯವರು ಇನ್ನಷ್ಟು ಮೊರ್ಬಿ ಮಾದರಿ ಸೇತುವೆ ಉದ್ಘಾಟಿಸಲಿ ಎಂದು ಕಾಯಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ.

- Advertisement -

ಹಿಮಾಚಲ ಪ್ರದೇಶದ ಚುನಾವಣೆ ಪ್ರಕ್ರಿಯೆ ಆರಂಭವಾದರೂ ಗುಜರಾತ್ ಚುನಾವಣಾ ದಿನಾಂಕ ಘೋಷಿಸಲು ಹಿಂದೆ ಮುಂದೆ ನೋಡಲಾಗುತ್ತಿದೆ. ಮೋದಿಯವರ ಆಡಳಿತದಡಿ ಅವರ ಪಕ್ಷದ ಅಧಿಕಾರದ ರಾಜ್ಯದಲ್ಲಿ ಸೇತುವೆಯೊಂದು ಉದ್ಘಾಟನೆಯಾದ ಐದೇ ದಿನದಲ್ಲಿ ಬಿದ್ದಾಗ ಪ್ರಧಾನಿ ಸಿಡಿದೇಳಬೇಕಿತ್ತು. ಕಮಿಷನ್ ಏಜೆಂಟರು ದೇವರ ಚಿತ್ತ ಎನ್ನುತ್ತಿದ್ದಾರೆ ಎಂದು ಖರ್ಗೆ ಕಾಲೆಳೆದರು.

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಖರ್ಗೆ, “ ತಿನ್ನಲಾರೆ, ತಿನ್ನಲು ಬಿಡಲಾರೆ ಎನ್ನುವ ಪ್ರಧಾನಿ ಬರೇ ಸುಳ್ಳು ಹೇಳುತ್ತಿದ್ದಾರೆ. ಪ್ರತಿಯೊಂದು ದನಿಯೂ ಈಗ ಮುಖ್ಯ. ನಾವೆಲ್ಲ ಒಕ್ಕೊರಲಿನಿಂದ ಮುಂದೆ ಬಂದು ದೇಶವನ್ನು ಸಬಲವಾಗಿಸಬೇಕು. ಭಾರತದ ಸೌಹಾರ್ದತೆ, ಒಗ್ಗಟ್ಟು ಮತ್ತು ವೈಭವವನ್ನು ಉಳಿಸಬೇಕಾಗಿದೆ” ಎಂದು ಖರ್ಗೆ ಹೇಳಿದರು.

- Advertisement -

“ಕಾಂಗ್ರೆಸ್ಸಿನ ಕೆಲಸ ನಿಮ್ಮ ಮುಂದಿದೆ. 70 ವರ್ಷಗಳಿಂದ ಕಾಂಗ್ರೆಸ್ ಏನು ಮಾಡಿದೆ ಎಂದು ಮೋದಿ ಕೇಳುತ್ತಾರೆ. ಏನೂ ಮಾಡಿರದಿದ್ದರೆ ಮೋದಿ ಪ್ರಧಾನಿ ಆಗುವುದೇ ಸಾಧ್ಯವಿರಲಿಲ್ಲ ಎಂದು ನಾನು ಹೇಳುತ್ತೇನೆ. ಜವಾಹರಲಾಲ ನೆಹರೂ ಅವರು ಪ್ರಜಾಪ್ರಭತ್ವಕ್ಕೆ ಭದ್ರ ಬುನಾದಿ ಹಾಕಿರುವುದರಿಂದ ಮೋದಿ ಪ್ರಧಾನಿಯಾಗಿದ್ದಾರೆ. ಕಾಂಗ್ರೆಸ್ ಅಂಬೇಡ್ಕರ್ ರಚಿಸಿದ ಸಂವಿಧಾನ ರಕ್ಷಿಸುವ ಕೆಲಸ ಮಾಡಿದೆ” ಎಂದು ಖರ್ಗೆ ಹೇಳಿದರು.

“ಕಳೆದ ಆರು ದಿನಗಳಿಂದ ಮೋದಿಯವರು ಗುಜರಾತ್ ಸುತ್ತುತ್ತಿದ್ದಾರೆ. ಹಿಮಾಚಲದಲ್ಲಿ ಚುನಾವಣೆ ಆಗುತ್ತಿದೆ. ಗುಜಾರಾತಿನಲ್ಲಿ ಮೋದಿಯವರು ಮೊರ್ಬಿ ಮಾದರಿಯ ಮತ್ತಷ್ಟು ಸೇತುವೆ ಉದ್ಘಾಟಿಸಬೇಕಾಗಿದೆಯೆ?” ಎಂದು ಖರ್ಗೆ ಪ್ರಶ್ನಿಸಿದರು.

ಕೇಂದ್ರ ಸರಕಾರದ ಉದ್ಯೋಗ ನೀಡಿಕೆ ನೀತಿಯನ್ನು ಟೀಕಿಸಿದ ಕಾಂಗ್ರೆಸ್ ಅಧ್ಯಕ್ಷರು, ಈಗ 13 ಲಕ್ಷ ಉದ್ಯೋಗಗಳು ಬರಿದಾಗಿದ್ದು, ಪ್ರಧಾನಿ ಸದ್ಯ 75,000 ಮಾತ್ರ ಭರ್ತಿ ಮಾತಾಡಿದ್ದಾರೆ ಎಂದರು.

ಎಸ್ ಸಿ/ಎಸ್ ಟಿ/ ಒಬಿಸಿ ಸ್ಥಾನಗಳು ಲಕ್ಷಗಟ್ಟಲೆ ಖಾಲಿ ಬಿದ್ದಿವೆ, ಅವನ್ನು ಭರ್ತಿ ಮಾಡುವುದು ಯಾವಾಗ ಎಂದೂ ಅವರು ಕೇಳಿದರು.

“ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಆಶ್ವಾಸನೆ ನೀಡಿದ್ದಿರಿ, ಎಂಟು ವರ್ಷ ಆಯ್ತಲ್ಲ, ಎಲ್ಲಿದೆ 16 ಕೋಟಿ ಉದ್ಯೋಗ ಮೋದಿಯವರೆ? ಲೆಕ್ಕ ಕೊಡಿ ನೋಡುವ. ಹೀಗೆ ನೀವು ಸುಳ್ಳಾಡುತ್ತಿದ್ದರೆ ಭಾರತದ ಯುವಜನರು ಎದ್ದೇಳುತ್ತಾರೆ. ಅದನ್ನು ನಾವು ಈ ಭಾರತ್ ಜೋಡೋ ಯಾತ್ರೆಯಲ್ಲಿ ನೋಡುತ್ತಿದ್ದೇವೆ.” ಎಂದು ಅವರು ಹೇಳಿದರು.

ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆ ವಿಷಯವಾಗಿಯೂ ಖರ್ಗೆಯವರು ಕೇಂದ್ರವನ್ನು ಟೀಕಿಸಿದರು.

ಬಿಜೆಪಿ ಮತ್ತು ಆರೆಸ್ಸೆಸ್ ಗಳು ದೇಶದ ಜನರನ್ನು ಒಡೆಯುತ್ತ ಸಾಗಿರುವುದನ್ನೂ ಅವರು ಟೀಕಿಸಿದರು.

ಈಗ ರಾಹುಲ್ ಗಾಂಧಿ ನಾಯಕತ್ವದಲ್ಲಿ ಬಿಜೆಪಿಯೇತರ ಸರಕಾರ ತರಬೇಕಾದ ಕಾಲ, ಅದು ನಿಮ್ಮ ಕೈಯಲ್ಲಿದೆ ಎಂದು ಖರ್ಗೆಯವರು ಒತ್ತಿ ತಿಳಿಸಿದರು.

ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ತರಲು ಪಕ್ಷದ ಕಾರ್ಯಕರ್ತರು ಬದ್ಧರಾಗಿ, ಪ್ರಬುದ್ಧರಾಗಿ ಕೆಲಸ ಮಾಡಬೇಕು ಎಂದು ಖರ್ಗೆ ಕಿವಿಮಾತು ಹೇಳಿದರು.

ಯುಪಿಎ ಸರಕಾರವು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದೆ. 2024ರಲ್ಲಿ ಕಾಂಗ್ರೆಸ್ ನೇತೃತ್ವದ ಒಕ್ಕೂಟ ಸರಕಾರ ರಚನೆಯಾಗುತ್ತದೆ ಎಂದು ಅವರು ಹೇಳಿದರು.



Join Whatsapp