ಕೇರಳ: ರಾಜ್ಯಕ್ಕೆ ನ್ಯಾಯಯುತ ತೆರಿಗೆ ಪಾಲು ಕೊಡದೇ ಇರುವ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟ ಸರಕಾರದ ಗ್ಯಾರಂಟಿ ಯೋಜನೆ’ಗಳನ್ನು ವಿಫಲಗೊಳಿಸುವ ಹುನ್ನಾರ ನಡೆಸಿದೆ ಎಂಬ ಗಂಭೀರ ಆರೋಪ ಸಚಿವ ದಿನೇಶ್ ಗುಂಡೂರಾವ್ ಮಾಡಿದ್ದಾರೆ.
ಕೇರಳದ ವಯನಾಡು ಕ್ಷೇತ್ರದ ಕಲ್ಪೆಟ್ಟಾದಲ್ಲಿ ಕಾಂಗ್ರೆಸ್ ಪರ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಗ್ಯಾರಂಟಿ ಯೋಜನೆಗಳು ಭ್ರಷ್ಟರಹಿತವಾಗಿ ನೇರವಾಗಿ ಜನರಿಗೆ ಆರ್ಥಿಕ ನೆರವು ನೀಡುತ್ತಿರುವುದನ್ನು ಬಿಜೆಪಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಬಡಜನರಿಗೆ ಆರ್ಥಿಕವಾಗಿ ನೆರವು ಒದಗಿಸುತ್ತಿರುವ ಗ್ಯಾರಂಟಿ ಯೋಜನೆಗಳನ್ನು ವಿಫಲಗೊಳಿಸುವ ಉದ್ದೇಶದಿಂದ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ತನ್ನ ತೆರಿಗೆ ಪಾಲನ್ನ ನೀಡದೆ ಹುನ್ನಾರ ನಡೆಸಿದೆ ಎಂದು ಹೇಳಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ನೀಡಬೇಕಾದ ನ್ಯಾಯಯುತ ತೆರಿಗೆ ಪಾಲನ್ನ ನೀಡುತ್ತಿಲ್ಲ. ಬಡ ಜನರಿಗೆ ಆರ್ಥಿಕ ನೆರವು ಸಿಗುತ್ತಿರುವುದು ಬಿಜೆಪಿ ಏಕೆ ಸಹಿಸಿಕೊಳ್ಳುತ್ತಿಲ್ಲ ಎಂದು ಗುಂಡೂರಾವ್ ಪ್ರಶ್ನಿಸಿದರು. ಶ್ರೀಮಂತ ಉದ್ಯಮಿಗಳ ಸಾವಿರಾರು ಕೋಟಿ ಸಾಲಮನ್ನಾ ಮಾಡಿ, ಬಡಜನರ ಮೇಲೆ ತೆರಿಗೆ ಭಾರ ಹೇರುತ್ತಿದೆ. ನಮ್ಮ ತೆರಿಗೆ ಪಾಲನ್ನು ನಮಗೆ ನೀಡದೆ ಹೊಟ್ಟೆ ತುಂಬಿದವರ ಜೇಬು ತುಂಬಿಸುತ್ತಿದೆ ಎಂದ ದಿನೇಶ್ ಗುಂಡೂರಾವ್, ಇದು ಯಾವ ಸೀಮೆ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಸೇಡಿನ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ಈ ಬಾರಿಯ ಲೋಕಸಭೆಯ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಬೇಕು. ಸಂವಿಧಾನ ರಕ್ಷಣೆಗಾಗಿ, ಜನಪರ ಆಡಳಿತ ನಡೆಸುವಂತ ಸರ್ಕಾರ ರಚನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕೆಂದು ಸಚಿವ ದಿನೇಶ್ ಗುಂಡೂರಾವ್ ಜನರಿಗೆ ಕರೆ ನೀಡಿದರು.