►ಇದು ಭಾರತದಲ್ಲಿ ವರದಿಯಾದ ಮೊದಲ ಪ್ರಕರಣ!
ಭೋಪಾಲ್: ಮಧ್ಯಪ್ರದೇಶದಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖನಾದ ಯುವಕನಿಗೆ ಗ್ರೀನ್ ಫಂಗಸ್ ಸೋಂಕು ದೃಢಪಟ್ಟಿದೆ. ಇದು ದೇಶದಲ್ಲಿ ವರದಿಯಾದ ಮೊದಲ ಪ್ರಕರಣವಾಗಿದೆ ಎಂದು ಹಿರಿಯ ವೈದ್ಯರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅದೇ ರೀತಿ ಬ್ಲ್ಯಾಕ್, ವೈಟ್ ಮತ್ತು ಎಲ್ಲೋ ಫಂಗಸ್ ಪ್ರಕರಣಗಳು ಈ ಹಿಂದೆ ವರದಿಯಾಗಿದ್ದವು. ಇದೀಗ ಗ್ರೀನ್ ಫಂಗಸ್ ಈ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.
ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಯನ್ನು ಏರ್ ಆಂಬ್ಯುಲೆನ್ಸ್ ನಲ್ಲಿ ಮುಂಬೈಗೆ ಕರೆದೊಯ್ಯಲಾಗಿದೆ. ಹಿಂದೂಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ ಎರಡು ತಿಂಗಳಿನಿಂದ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆದಿದ್ದಾನೆ. 10-15 ದಿನಗಳಿಂದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಅನಾರೋಗ್ಯ ಉಲ್ಬಣಗೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತೀವ್ರ ಜ್ವರ ಮತ್ತು ಮೂಗಿನಿಂದ ರಕ್ತ ಸ್ರಾವವಾಗುತ್ತಿದ್ದ ಕಾರಣ ಬ್ಲ್ಯಾಕ್ ಫಂಗಸ್ ಬಗ್ಗೆ ಶಂಕಿಸಲಾಗಿತ್ತು. ಆದರೆ ಪರೀಕ್ಷೆ ನಡೆಸಿದ ವೈದ್ಯರು ಯುವಕ ಗ್ರೀನ್ ಫಂಗಸ್ ನಿಂದ ಬಳಲುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ದೇಶದಲ್ಲಿ ಮೊದಲು ವರದಿಯಾದ ಈ ಗ್ರೀನ್ ಫಂಗಸ್, ರೋಗಿಯ ಶ್ವಾಸಕೋಶಗಳು, ಸೈನಸ್ ಗಳು ಮತ್ತು ರಕ್ತದ ಮೇಲೆ ಪರಿಣಾಮ ಬೀರಿದೆ ಎಂದು ಡಾ. ರವಿ ದೋಸ್ಸಿ ತಿಳಿಸಿದ್ದಾರೆ.