ಬೆಂಗಳೂರು : ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ವಾಯು ಮಾಲಿನ್ಯ ನಿಯಂತ್ರಣದ ದೃಷ್ಟಿಯಿಂದ ಈ ಬಾರಿ ಹಸಿರು ಪಟಾಕಿ ಮಾತ್ರ ಬಳಕೆ ಮಾಡುವಂತೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ಈ ಸಂಬಂಧ ಸರಕಾರಕ್ಕೆ ಹಲವು ನಿರ್ದೇಶನಗಳನ್ನು ನೀಡಿದೆ.
ಹಸಿರು ಪಟಾಕಿ ಎಂದರೇನು ? : ಹಸಿರು ಪಟಾಕಿ ಎಂದರೇನು ಎಂಬುದು ಜನರಿಗೆ ಹಲವು ಗೊಂದಲಗಳಿವೆ. ಅವುಗಳನ್ನು ಗುರುತಿಸುವುದು ಹೇಗೆ ಎಂಬ ಪ್ರಶ್ನೆಯೂ ಹಲವರಲ್ಲಿದೆ. ಸರಕಾರ ಅದಕ್ಕೆಲ್ಲ ಸ್ಪಷ್ಟನೆ ನೀಡಿದ್ದು, ಹಬ್ಬದ ಸಂದರ್ಭ ಕಡಿಮೆ ಮಾಲಿನ್ಯ ಮಾಡುವ ಹಸಿರು ಪಟಾಕಿಗಳನ್ನೇ ಬಳಸಬೇಕೆಂದು ಸರಕಾರ ಸಾರ್ವಜನಿಕರನ್ನು ಒತ್ತಾಯಿಸಿದೆ.
ಹಸಿರು ಪಟಾಕಿಯನ್ನು NEERI ಲ್ಯಾಬ್ ಫಾರ್ಮುಲಾದ ಪ್ರಕಾರ ತಯಾರಿಸಲಾಗುತ್ತದೆ. ಇದಕ್ಕೆ ಪೆಟ್ರೋಲಿಯಂ ಮತ್ತು ಎಕ್ಸ್ ಪ್ಲೋಸಿವ್ ಸೇಫ್ಟಿ ಆರ್ಗನೈಸೇಷನ್ ಪ್ರಮಾಣೀಕರಣ ನೀಡಿದೆ. ಗ್ರಾಹಕರು ಹಸಿರು ಪಟಾಕಿ ಖರೀದಿಸುವಾಗ ಪಟಾಕಿ ಬಾಕ್ಸ್ ಗಳ ಮೇಲೆ NEERI ಮತ್ತು PESO ಲಾಂಛನಗಳನ್ನು ಮುಖ್ಯವಾಗಿ ಗಮನಿಸಬೇಕು. ನಿಮ್ಮ ಮೊಬೈಲ್ ಮೂಲಕ ಬಾಕ್ಸ್ ಮೇಲಿನ ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡಿಯೂ ಪರೀಕ್ಷಿಸಬಹುದು.
ಸಿಎಸ್ ಐಆರ್ ಮತ್ತು ನೀರಿ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಕಂಪೆನಿಗಳಿಂದ ಮಾತ್ರ ಪಟಾಕಿ ಮಾರಾಟಕ್ಕೆ ಅನುಮತಿಯಿದೆ. ಈ ಎರಡೂ ಸಂಸ್ಥೆಗಳು ಜಂಟಿಯಾಗಿ ಹಸಿರು ಪಟಾಕಿಯನ್ನು ಅಭಿವೃದ್ಧಿ ಪಡಿಸಿವೆ.