ಸಚಿವರ ಹುದ್ದೆಯನ್ನು ಕಿತ್ತು ಹಾಕುತ್ತೇನೆ ಎಂದ ಆರಿಫ್ ಖಾನ್ ಗೆ ಮುಖ್ಯಮಂತ್ರಿ ತಿರುಗೇಟು
ಕೇರಳ: ಚುನಾಯಿತ ಸರ್ಕಾರದ ಸಚಿವರನ್ನು ಆ ಸ್ಥಾನದಿಂದ ತೆಗೆದುಹಾಕುವ ಅಧಿಕಾರ ರಾಜ್ಯದ ರಾಜ್ಯಪಾಲರಿಗೆ ಇಲ್ಲ , ಆ ಅಧಿಕಾರ ಮುಖ್ಯಮಂತ್ರಿಗೆ ಮಾತ್ರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ರಾಜ್ಯಪಾಲರನ್ನು ನಿಂದನೆ ಮಾಡಿದರೆ ಅವರನ್ನು ಹುದ್ದೆಯಿಂದ ತೆಗೆದುಹಾಕುತ್ತೇನೆ ಎಂದು ಎಲ್ಡಿಎಫ್ ಸಚಿವರಿಗೆ ನೀಡಿದ ಬೆದರಿಕೆಯ ಧ್ವನಿಯಲ್ಲಿ ಎಚ್ಚರಿಕೆ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಕೇರಳ ಸಿಎಂ, ಯಾರನ್ನೇ ಆಗಲಿ ಟೀಕಿಸಲೇಬಾರದು ಎಂಬ ನಿಲುವು ನಮ್ಮ ಸಮಾಜದಲ್ಲಿ ಸ್ವೀಕಾರಾರ್ಹವಲ್ಲ, ಏಕೆಂದರೆ ನಮ್ಮ ಸಂವಿಧಾನವು ಟೀಕೆ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ನೀಡುತ್ತದೆ ಎಂದು ವಿಜಯನ್ ಹೇಳಿದರು.
ಸಂವಿಧಾನ ಮತ್ತು ನ್ಯಾಯಾಲಯದ ತೀರ್ಪುಗಳು ಫೆಡರಲ್ ವ್ಯವಸ್ಥೆಯಲ್ಲಿ ರಾಜ್ಯಪಾಲರ ಅಧಿಕಾರ ಯಾವುದು ಮತ್ತು ಚುನಾಯಿತ ಸಂಪುಟದ ಸ್ಥಾನಗಳು, ಕರ್ತವ್ಯಗಳು ಮತ್ತು ಜವಾಬ್ದಾರಿಗಳು ಯಾವುದು ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿವೆ . ಆದ್ದರಿಂದ ಚುನಾಯಿತ ಸರ್ಕಾರದ ಸಚಿವರನ್ನು ಆ ಸ್ಥಾನದಿಂದ ತೆಗೆದುಹಾಕುವ ಅಧಿಕಾರ ರಾಜ್ಯದ ರಾಜ್ಯಪಾಲರಿಗೆ ಇಲ್ಲ , ಆ ಅಧಿಕಾರ ಮುಖ್ಯಮಂತ್ರಿಗೆ ಮಾತ್ರ ಎಂದು ರಾಜ್ಯಪಾಲ ಆರಿಫ್ ಖಾನ್ ಹೇಳಿಕೆಗೆ ತಿರುಗೇಟು ನೀಡಿದರು.
ಸಿಎಂ ಹಸ್ತಾಂತರ ಮಾಡಿದ ನೇಮಕ, ಅಮಾನತು ಅಥವಾ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಹಸ್ತಾಂತರಿಸಲಾಗುತ್ತದೆ. ರಾಜ್ಯಪಾಲರ ವಿವೇಚನಾ ಅಧಿಕಾರಗಳು ಬಹಳ ಸಂಕುಚಿತವಾಗಿವೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ಕೂಡ ಹೇಳಿದ್ದರು ಎಂದು ವಿಜಯನ್ ಸ್ಪಷ್ಟಪಡಿಸಿದರು.