ಶಿಂಧೆಗೆ ಪೇಡಾ ತಿನ್ನಿಸಿದ ರಾಜ್ಯಪಾಲರು : ಕೋಶಿಯಾರಿಗೆ ಟಕ್ಕರ್ ಕೊಟ್ಟ ಪವಾರ್

Prasthutha|

►ಉದ್ಧವ್ ಸರಕಾರ ಉರುಳಿದ್ದಲ್ಲಿ ಅಧಿಕ ಖುಷಿಪಟ್ಟದ್ದು ರಾಜ್ಯಾಪಾಲರು ಎಂದ ಶಿವಸೇನೆ

- Advertisement -

ಮುಂಬೈ: ಮಹಾರಾಷ್ಟ್ರದಲ್ಲಿ ಏಕನಾಥ್‌ ಶಿಂಧೆ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇಂದು ವಿಧಾನಸಭೆಯಲ್ಲಿ ವಿಶ್ವಾಸಮತವನ್ನೂ ಅವರು ಸಾಬೀತು ಮಾಡಿದ್ದಾರೆ. ಇದರ ನಡುವೆ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಶಿವಸೇನೆ ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ  ಪ್ರಕಟಿಸಿರುವ ಶರದ್ ಪವಾರ್ ಅವರ ಮಾತುಗಳು ವೈರಲ್ ಆಗಿವೆ.

ರಾಜ್ಯಪಾಲ ಭಗತ್‌ ಸಿಂಗ್ ಕೋಶಿಯಾರಿ ವಿರುದ್ಧ ಸಾಮ್ನಾದಲ್ಲಿ ಬರೆದಿರುವ ಶಿವಸೇನೆ, ಬಹುಶಃ ಮಹಾರಾಷ್ಟ್ರ ರಾಜಕಾರಣದಲ್ಲಿ ಸರ್ಕಾರ ಬದಲಾಗಿರುವ ಬಗ್ಗೆ ಯಾರಿಗಾದರೂ ಸಂಭ್ರಮವಾಗಿದ್ದರೆ, ಅದು ರಾಜ್ಯಪಾಲರಿಗೆ ಮಾತ್ರ. ಅದು ಅವರ ಮುಖದಲ್ಲೇ ಎದ್ದು ಕಾಣುತ್ತಿತ್ತು ಎಂದು ಬರೆದುಕೊಂಡಿದ್ದಾರೆ.

- Advertisement -

ಸಾಮ್ನಾ ಪತ್ರಿಕೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೇಳಿರುವ ಮಾತುಗಳನ್ನು ಉಲ್ಲೇಖಿಸಿದ್ದು, ನಾನೂ ಕೂಡ ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದೆ, ಆದರೆ, ಎಂದಿಗೂ ರಾಜ್ಯಪಾಲರು ನನಗೆ ಪೇಡಾ ತಿನ್ನಿಸಿರಲಿಲ್ಲ’ ಎಂದು ಹೇಳಿದ್ದನ್ನು ಪ್ರಕಟಿಸಿದೆ.

ಬಹುಶಃ ಉದ್ದವ್‌ ಮುಖ್ಯಮಂತ್ರಿ ಆದಾಗ ಮಹಾರಾಷ್ಟ್ರದಲ್ಲಿ ಪೇಡಾ ಅಂಗಡಿಗಳು ಇದ್ದಿರಲಿಲ್ಲ, ಬ್ರಿಟಿಷ್‌ ಕಾಲದಲ್ಲಿ ಭಗತ್‌ ಸಿಂಗ್‌ರನ್ನು ಗಲ್ಲಿಗೇರಿಸಿದಾಗ ಅವರು ಖುಷಿ ಪಟ್ಟಿದ್ದರು. ಅದರಂತೆ, ನಮ್ಮ ಸರ್ಕಾರ ಉರುಳಿದಾಗ ಭಗತ್‌ ಸಿಂಗ್ ಕೋಶಿಯಾರಿ ಕೂಡ ಖುಷಿ ಪಟ್ಟಿದ್ದಾರೆ. ಬಹುಶಃ ಅವರಿಗಿಂತ ಖುಷಿಯಾದವರೂ ಯಾರೂ ಇರಲಿಕ್ಕಿಲ್ಲ. ಉದ್ಧವ್‌ ಠಾಕ್ರೆ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಗವರ್ನರ್‌ ಖುಷಿಯಾಗಿರಲಿಲ್ಲ ಅಥವಾ ರಾಜಭವನದ ಸಮೀಪವಿರುವ ಎಲ್ಲಾ ಪೇಡಾ ಅಂಗಡಿಗಳು ಅಂದು ಬಂದ್ ಮಾಡಿದ್ದಿರಬೇಕು ಎಂದು ವ್ಯಂಗ್ಯವಾಡಿದೆ.

ಸಾಂವಿಧಾನಿಕಾಗಿ ರಾಜ್ಯಪಾಲರಿಗೆ ಹೂಗುಚ್ಛ ನೀಡಿ ಅಭಿನಂದನೆ ಸಮರ್ಪಿಸುವ ಜವಾಬ್ದಾರಿಯೇ ಹೊರತು ಸಿಹಿ ಹಂಚಿಕೊಂಡು ಸಂಭ್ರಮಾಚರಿಸುವಂತಿಲ್ಲ. ಆದರೆ  ಬಂಡಾಯ ಶಾಸಕ ಏಕನಾಥ್ ಶಿಂಧೆ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ರಾಜ್ಯಪಾಲರನ್ನು ಭೇಟಿ ಮಾಡಿ , ಸರ್ಕಾರ ರಚನೆಯ ಹಕ್ಕೊತ್ತಾಯ ಮಂಡಿಸಿದಾಗ ರಾಜ್ಯಪಾಲರು ಉಭಯ ನಾಯಕರಿಗೆ ಸಿಹಿ ತಿನ್ನಿಸಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಾದ ಬಳಿಕ ಶರದ್ ಪವಾರ್ ಹೇಳಿಕೆ ಹೊರಬಿದ್ದಿದೆ.

Join Whatsapp