ಶೋಷಣೆಗೊಳಪಟ್ಟ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಸರ್ಕಾರದ ಜವಾಬ್ದಾರಿ: ಸಿದ್ದರಾಮಯ್ಯ

Prasthutha|

ಮೈಸೂರು: ಶೋಷಣೆಗೊಳಪಟ್ಟ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆಗ ಮಾತ್ರ ಸಮಾನತೆ, ಸಮಾನ ಅವಕಾಶ, ಸಮಾನ ಬೆಳವಣಿಗೆ ಕಾಣಲು ಸಾಧ್ಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

- Advertisement -

ಮೈಸೂರಿನ ಹೆಗ್ಗಡದೇವನಕೋಟೆಯಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ ಇದ್ದು, ಇದು ಹುಟ್ಟಿದ್ದು ಯಾವಾಗ? ಹೇಗೆ ಹುಟ್ಟಿದೆ? ಇದು ಯಾಕೆ ಜೀವಂತವಾಗಿದೆ ಎಂಬ ಬಗ್ಗೆ ತಮ್ಮೆಲ್ಲರಿಗೂ ತಿಳಿದಿದೆ. ನಾವೆಲ್ಲ ಮನುಷ್ಯರು, ಮನುಷ್ಯರಾಗಿ ಬಾಳಬೇಕು. ಈ ಜಾತಿ ವ್ಯವಸ್ಥೆಯ ಕಾರಣಕ್ಕಾಗಿ ಸಮಾಜದಲ್ಲಿ ಅಸಮಾನತೆ ನಿರ್ಮಾಣವಾಗಿದೆ. ಇದು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅಸಮಾನತೆ ನಿರ್ಮಾಣ ಮಾಡಿದೆ. ನಮ್ಮ ದೇಶದಲ್ಲಿ ನೂರಾರು ವರ್ಷಗಳ ಕಾಲ ರಾಜಪ್ರಭುತ್ವ ಇತ್ತು, ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದೇವೆ, ಈ ಪ್ರಜಾಪ್ರಭುತ್ವ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳು, ಸಮಾನ ಅವಕಾಶಗಳನ್ನು ನೀಡಿದೆ, ಇಷ್ಟಾದರೂ ಇನ್ನೂ ಜಾತಿ ವ್ಯವಸ್ಥೆ ಜೀವಂತವಾಗಿದೆ ಎಂದು ತಿಳಿಸಿದರು.

ನಮಗೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ. ಈ 75 ವರ್ಷಗಳಲ್ಲಿ ಕೆಲವರಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಸಿಕ್ಕಿದೆ, ಕೆಲವರಿಗೆ ಇದು ಸಿಕ್ಕಿಲ್ಲ. ಇಲ್ಲಿ ಯಾರೂ ದಡ್ಡರು ಎಂಬುದು ನನ್ನ ಅಭಿಪ್ರಾಯವಲ್ಲ. ಕೆಲವರು ತಮ್ಮ ವೃತ್ತಿಗಳಲ್ಲಿ, ತಾವು ನಡೆಸಿಕೊಂಡು ಬಂದ ಕಾಯಕದಲ್ಲಿ ಜಾಣತನವನ್ನು ಪ್ರದರ್ಶನ ಮಾಡುತ್ತಾರೆ, ಒಬ್ಬ ರೈತನಿಗೆ ವ್ಯವಸಾಯದಲ್ಲಿ ಇರುವ ಜ್ಞಾನ ಒಬ್ಬ ವಿಜ್ಞಾನಿಗೆ ಇರಲಾರದು, ಅದೇ ರೀತಿ ವಿಶ್ವಕರ್ಮ ಸಮಾಜದವರು ಮಾಡುವ ಕಾಯಕದಲ್ಲಿ ವಿಶೇಷ ಜ್ಞಾನ ಸಂಪಾದನೆ ಮಾಡಿದ್ದಾರೆ. ಆದರೆ ಈ ವಿಶ್ವಕರ್ಮ ಸಮಾಜ ತನ್ನ ಕಾಯಕದಲ್ಲಿ ತಲ್ಲೀನವಾದ ಪರಿಣಾಮ ಶಿಕ್ಷಣದಿಂದ ವಂಚಿತವಾಯಿತು. ಜಾತಿ ವ್ಯವಸ್ಥೆಯಲ್ಲಿ ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯ ಈ ಮೂರು ವರ್ಣಗಳನ್ನು ಬಿಟ್ಟರೆ ಇತರರಿಗೆ ಶಿಕ್ಷಣ ಕಲಿಯುವ ಅವಕಾಶ ಇರಲಿಲ್ಲ. 100 ರಲ್ಲಿ 70% ಜನ ಶಿಕ್ಷಣದಿಂದ ವಂಚಿತರಾದರು. ದೇಶದಲ್ಲಿ ಬ್ರಿಟೀಷರ ಆಗಮನದ ನಂತರ ಅವರಿಗೆ ಕಾರಕೂನರ ಅಗತ್ಯವಿದ್ದುದ್ದರಿಂದ ಎಲ್ಲಾ ಸಮಾಜದ ಜನರಿಗೆ ಶಿಕ್ಷಣ ಅವಕಾಶ ಸಿಕ್ಕಿತ್ತು. ಮೊದಲಿನಿಂದಲೂ ಬ್ರಾಹ್ಮಣ, ಕ್ಷತ್ರಿಯ, ಶೂದ್ರರಂತೆ ಶಿಕ್ಷಣದ ಅವಕಾಶ ಸಿಕ್ಕಿದ್ದರೆ ಇಂದು ವಿಶ್ವಕರ್ಮ ಸಮಾಜ ಶಿಕ್ಷಣದಲ್ಲಿ ಹಿಂದುಳಿಯುವಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ವಿಷಾಧಿಸಿದರು.

- Advertisement -

ನಮಗೆ ಸ್ವಾತಂತ್ರ್ಯ ಬಂದಾಗ ದೇಶದ ಅಕ್ಷರಸ್ಥರ ಪ್ರಮಾಣ 16% ಇತ್ತು, ಇಂದು ಅದು 78% ಆಗಿದೆ. ಆದರೆ ಇನ್ನೂ 22% ಜನ ಹೆಬ್ಬೆಟ್ಟು ಒತ್ತಬೇಕಾದ ಸ್ಥಿತಿ ಇದೆ. ಉದಾಹರಣೆಗೆ ನನ್ನ ತಂದೆ ತಾಯಿ ವಿದ್ಯೆ ಕಲಿತವರಲ್ಲ, ನನಗೆ ವಿದ್ಯಾವಂತನಾಗುವ ಅವಕಾಶ ಸಿಕ್ಕಿತು. ಇದರಿಂದ ನಾನು ವಕೀಲ, ಮಂತ್ರಿ, ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಇದಕ್ಕೆ ನಮ್ಮ ಸಂವಿಧಾನ ಕಾರಣ. ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ಸಾಧ್ಯವಾಗಿದ್ದು ಕೂಡ ಬಾಬಾ ಸಾಹೇಬರು ರಚಿಸಿರುವ ಸಂವಿಧಾನದಿಂದ. ಒಂದು ವೇಳೆ ಈ ಸಂವಿಧಾನ ಇಲ್ಲದೆ ಹೋಗಿದ್ದರೆ ಆಳುವ ಮೇಲ್ವರ್ಗದ ಜನರೇ ಅಧಿಕಾರದಲ್ಲಿ ಇರುತ್ತಿದ್ದರು, ಶೂದ್ರರನ್ನು ಅಧಿಕಾರದಲ್ಲಿ ಕಾಣಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಈ ಸಂವಿಧಾನವನ್ನು ಬದಲಾವಣೆ ಮಾಡಬೇಕು ಎಂದು ಸಮಾಜದ ಕೆಲವು ಪಟ್ಟಭದ್ರಹಿತಾಸಕ್ತಿಗಳು ಸಂವಿಧಾನ ಬದಲಾವಣೆ ಮಾಡುವ ಕುಠಿಲ ಪ್ರಯತ್ನ ಮಾಡುತ್ತವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶ್ವಕರ್ಮ ಸಮುದಾಯಕ್ಕೆ ವಿಶೇಷ ಮೀಸಲಾತಿ ಎಂಬ ವಿಚಾರವನ್ನು ಇಲ್ಲಿ ಪ್ರಸ್ತಾಪ ಮಾಡಿದ್ದಾರೆ. ನಾನು ಮುಖ್ಯಮಂತ್ರಿಯಾಗಿರುವಾಗ ಎಲ್ಲ ಮಕ್ಕಳಿಗೂ ಉಚಿತವಾಗಿ ಹಾಲು ನೀಡುವ, ಬಿಸಿಯೂಟ ನೀಡುವ, ಸಮವಸ್ತ್ರ, ಶೂ ನೀಡುವ ಕಾರ್ಯಕ್ರಮ ಜಾರಿಗೆ ತಂದೆ. ಹಿಂದೆ ಹೀಗಿತ್ತಾ? ಬರೀ ಶ್ರೀಮಂತರ ಮಕ್ಕಳು ಶೂ, ಸಾಕ್ಸ್‌ ಹಾಕಿಕೊಂಡು ಬಂದರೆ ಸಾಕ? ಬಡವರ ಮಕ್ಕಳು ಅವರಂತೆ ಬರಬಾರದಾ? ಈ ಎಲ್ಲಾ ಮಕ್ಕಳಲ್ಲೂ ಸಮಾನತೆ ಕಾಣಬೇಕು, ಆ ಮೂಲಕ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದು ನನ್ನ ಉದ್ದೇಶವಾಗಿತ್ತು ಎಂದು ತಿಳಿಸಿದರು.

ವಿಶ್ವಕರ್ಮ ಸಮಾಜದ ಎಲ್ಲರೂ ಶಿಕ್ಷಿತರಾಗಬೇಕು, ಈ ಸಮಾಜದಲ್ಲಿ ಬುದ್ದಿವಂತರಿಗೆ ಬರವಿಲ್ಲ, ಆದರೆ ಶಿಕ್ಷಣ ಪಡೆದವರ ಸಂಖ್ಯೆ ಕಡಿಮೆಯಿದೆ. ಮತ್ತೆ ಅಪ್ಪ ಹಾಕಿದ ಆಲದ ಮರಕ್ಕೆ ನೇತುಬಿದ್ದಿರಬೇಕು ಎಂಬ ನಿಯಮವಿಲ್ಲ, ನೀವೂ ಕೂಡ ಡಾಕ್ಟರ್‌, ಎಂಜಿನಿಯರ್‌, ಕೈಗಾರಿಕೋದ್ಯಮಿಗಳಾಗಬೇಕು. ನಾನೂ ಹಿಂದೆ ಕಾನೂನು ಪದವಿ ಓದಬೇಕು ಎಂದುಕೊಂಡಾಗ ನನ್ನಪ್ಪ ಶಾನುಭೋಗರ ಬಳಿ ಹೋಗಿ ಮಗ ಕಾನೂನು ಓದಬೇಕು ಅಂದುಕೊಂಡಿದ್ದಾನೆ, ಏನು ಮಾಡೋದು ಅಂತ ಕೇಳಿದ್ರಂತೆ, ಅದಕ್ಕೆ ಆ ಶಾನುಭೋಗರು ಕುರುಬರು ಯಾರಾದ್ರೂ ಲಾಯರ್‌ ಆಗೋಕಾಗುತ್ತಾ? ಸುಮ್ಮನೆ ಕೆಲಸಕ್ಕೆ ಕಳಿಸು ಎಂದು ಹೇಳಿದ್ರಂತೆ. ಒಂದು ವೇಳೆ ನಾನೂ ಆ ಶಾನುಭೋಗರ ಮಾತು ಕೇಳಿ ಕಾನೂನು ಓದದೆ ಇದ್ದರೆ ಏನಾಗುತ್ತಿತ್ತು ನೀವೆ ಹೇಳಿ. ವಿದ್ಯೆ ಯಾರಪ್ಪನ ಮನೆ ಸ್ವತ್ತು ಅಲ್ಲ. ದಲಿತ ಜಾತಿಯಲ್ಲಿ ಹುಟ್ಟಿದ ಅಂಬೇಡ್ಕರ್‌ ಅವರು ಸಂವಿಧಾನ ರಚನೆ ಮಾಡಿಲ್ವಾ? ಜಾತಿಯಿಂದ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ. ಜಾತಿಯಿಂದ ಜ್ಞಾನಿಯಾಗಲು ಸಾಧ್ಯವಿಲ್ಲ. ಅವಕಾಶಗಳು ಸಿಕ್ಕರೆ ಎಲ್ಲರೂ ಬುದ್ದಿವಂತರಾಗಲೂ, ಎಲ್ಲ ರೀತಿಯ ಉದ್ಯೋಗ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಸಾಂದರ್ಭಿಕವಾಗಿ ನುಡಿದರು.

1994-95 ರಲ್ಲಿ ರಾಜೀವ್‌ ಗಾಂಧಿ ಅವರು ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತಂದರು. ಆ ವರೆಗೆ ಹಿಂದುಳಿದ ಜಾತಿಗಳಿಗೆ, ಮಹಿಳೆಯರಿಗೆ ರಾಜಕೀಯ ಮೀಸಲಾತಿ ಇರಲಿಲ್ಲ. ಇಲ್ಲಿ ಸೇರಿರುವ ಬಹಳಷ್ಟು ಜನ ಬಿಸಿಎಂ(ಎ), ಬಿಸಿಎಂ(ಬಿ) ಮೀಸಲಾತಿ ಅಡಿ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ, ನಗರಪಾಲಿಕೆ ಮುಂತಾದ ಸ್ಥಳೀಯ ಸಂಸ್ಥೆಗಳ ಸದಸ್ಯರಾಗಿದ್ದರೆ ಅದಕ್ಕೆ ಈ ತಿದ್ದುಪಡಿ ಕಾರಣ. ಮೊದಲು ಬಹಳಷ್ಟು ಜನರಿಗೆ ರಾಜಕೀಯ ಅಧಿಕಾರ ಸಿಕ್ಕಿರಲಿಲ್ಲ, ರಾಜಕೀಯ ಅಧಿಕಾರ ಬಹಳ ಪ್ರಬಲವಾದ ಅಸ್ತ್ರ. ಈ ಸಮುದಾಯದ ರಘು ಆಚಾರ್‌, ಕೆ.ಪಿ ನಂಜುಂಡಿ ಅವರು ವಿಧಾನಪರಿಷತ್‌ ಸದಸ್ಯರಾಗಿದ್ದಾರೆ, ಇದು ಇಷ್ಟಕ್ಕೆ ಸೀಮಿತವಾಗಬಾರದು, ಸಂಸದರು, ಶಾಸಕರು ಆಗಬೇಕು. ಆಗ ನಿಮ್ಮ ಧ್ವನಿ ಸದನದಲ್ಲಿ, ಸಂಸತ್ತಿನಲ್ಲಿ ಕೇಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರೂಪಾಯಿ ನೀಡಿದ್ದೆ. ಅದನ್ನು ಈಗಿನ ಸರ್ಕಾರಗಳು ಇನ್ನೂ ಹೆಚ್ಚು ಮಾಡುತ್ತಾ ಹೋಗಬೇಕಿತ್ತು. ಈ ಬಗ್ಗೆ ಸಮುದಾಯದ ರಾಜಕೀಯ ನಾಯಕರು ಒತ್ತಾಯ ಮಾಡಿ ಕನಿಷ್ಠ 200 ರಿಂದ 300 ಕೋಟಿ ಮಾಡಬೇಕಿತ್ತು. ಇದರಿಂದ ಈ ಸಮಾಜಕ್ಕೆ ಆರ್ಥಿಕವಾಗಿ ಸಹಾಯವಾಗಲಿದೆ. ಒಂದು ವೇಳೆ ರಾಜ್ಯದ ಜನ ನನಗೆ ಮತ್ತೆ ಅವಕಾಶ ನೀಡಿದ್ರೆ ನಿಗಮಕ್ಕೆ ಹೆಚ್ಚಿನ ಅನುದಾನ ನೀಡುತ್ತೇನೆ. ಕುಲಶಾಸ್ತ್ರ ಅಧ್ಯಯನ ಮುಗಿದು ವರದಿ ಬರಲಿ ಆಮೇಲೆ ಏನು ಮಾಡಬೇಕು ಎಂಬ ಬಗ್ಗೆ ನಿರ್ಧಾರ ಮಾಡೋಣ. ಎಸ್‌.ಟಿ ಗೆ ಸೇರಬೇಕು ಎಂಬ ಒತ್ತಾಯ ಇದೆ. ನಾಯಕ ಜನಾಂಗದ ಪರಿವಾರ ಮತ್ತು ತಳವಾರ ಸಮುದಾಯವನ್ನು ಎಸ್‌,ಟಿ ಗೆ ಸೇರಿಸಬೇಕು ಎಂದು ಶಿಫಾರಸು ಮಾಡಿದ್ದು ನಾನು. ಈ ಸಮಾಜದ ಮೀಸಲಾತಿ ಹೆಚ್ಚು ಮಾಡಬೇಕು ಎಂದು ನಾನು ಹಿಂದೆಯೇ ಹೇಳಿದ್ದೆ. ಗಂಗಮತಸ್ಥರನ್ನು ಎಸ್‌,ಟಿ ಗೆ ಸೇರಿಸಬೇಕು ಎಂದು 1998ರಲ್ಲಿ ಶಿಫಾರಸು ಮಾಡಿದ್ದೆ. ಕಾಡುಗೊಲ್ಲರನ್ನು ಎಸ್‌,ಟಿ ಸೇರಿಸಬೇಕು ಎಂದು ಶಿಫಾರಸು ಮಾಡಿದ್ದು ನಾನೆ. ಇದು ಕುಲಶಾಸ್ತ್ರ ಅಧ್ಯಯನ ನಡೆದು ವರದಿ ಬಂದಿದೆ. ನನ್ನ ಮುಖ್ಯ ಉದ್ದೇಶ ಸಂವಿಧಾನದ ಧ್ಯೇಯೋದ್ದೇಶಗಳು ಜಾರಿಯಾಗಬೇಕು ಎಂಬುದು ನನ್ನ ಉದ್ದೇಶ ಎಂದು ತಿಳಿಸಿದರು.

ಶ್ರೇಣೀಕೃತ ವ್ಯವಸ್ಥೆಯಲ್ಲಿ ಇದ್ದ ಅಸಮಾನತೆಯನ್ನು ತೊಡೆದುಹಾಕಲು ಬಸವಣ್ಣನವರು ಅನುಭವ ಮಂಟಪ ಸ್ಥಾಪನೆ ಮಾಡಿ ಎಲ್ಲರಿಗೂ ಸಮಾನವಾಗಿ ಕುಳಿತುಕೊಳ್ಳುವ ಅವಕಾಶ ನೀಡಿದರು. ಇದರಿಂದ ನಾವು ಇಂದಿಗೂ ಬಸವಣ್ಣನವರನ್ನು ನೆನೆಯುತ್ತೇವೆ. ಇಂದು ವೇದಿಕೆ ಮೇಲೆ ಕೂಡ ಎಲ್ಲ ಜನಾಂಗದವರು ಸಮಾನವಾಗಿ ಕುಳಿತುಕೊಂಡಿದ್ದಾರೆ. ಈ ರೀತಿ ಸಮಾನತೆ ಇರಬೇಕು. ಜಾತಿಯಿಂದ ವರ್ಗ ಆಗಿ ಅದರಂತೆ ಸಮಾಜದಲ್ಲಿ ಸಮಾನತೆ ಬರಬೇಕು. ಇದಾಗಬೇಕಾದರೆ ಜಾತಿ ವ್ಯವಸ್ಥೆಗೆ ಆರ್ಥಿಕ ಮತ್ತು ಸಾಮಾಜಿಕ ಚಲನೆ ಸಿಗಬೇಕು. ಆದರೆ ಜಾತಿ ವ್ಯವಸ್ಥೆ ನಿಂತ ನೀರಾಗಿದೆ, ಚಲನೆ ಇಲ್ಲದ ಸಮುದಾಯಗಳು ಮೇಲೆ ಬರಲು ಸಾಧ್ಯವಿಲ್ಲ. ಶಿಕ್ಷಣ ಮತ್ತು ಆರ್ಥಿಕ ಶಕ್ತಿ ಸಿಕ್ಕಾಗ ಚಲನೆ ಬರುತ್ತದೆ. ಅನೇಕ ಸಮಾಜ ಸುಧಾರಕರು ಬದಲಾವಣೆ ತರಲು ಪ್ರಯತ್ನ ಮಾಡಿದರೂ, ನಮ್ಮ ಜಾತಿ ವ್ಯವಸ್ಥೆ ಚಲನ ರಹಿತವಾಗಿರುವುದರಿಂದ ಬದಲಾವಣೆ ಸಾಧ್ಯವಾಗಿಲ್ಲ. ನಮ್ಮ ಸಮಾಜದ ಎಲ್ಲರಿಗೂ ಮತದಾನದ ಸ್ವಾತಂತ್ರ್ಯ ಸಿಕ್ಕಿದೆ. ಎಲ್ಲರ ಮತಕ್ಕೂ ಒಂದೇ ಮೌಲ್ಯ ಇದೆ. ಆದರೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಎಲ್ಲರ ಮೌಲ್ಯ ಒಂದೇ ತರನಾಗಿಲ್ಲ. ಇದು ಬದಲಾವಣೆ ಆಗಬೇಕು. ವಿಶ್ವಕರ್ಮ ಸಮಾಜಕ್ಕೆ ತಕ್ಷಣ ಗ್ರಹಿಸುವ ಸಾಮರ್ಥ್ಯ ಇದ್ದೂ ಕೂಡ ಇನ್ನೂ ಶಿಕ್ಷಣದಲ್ಲಿ ಹಿಂದುಳಿದಿರುವುದು ಯೋಚಿಸಬೇಕಾದ ವಿಚಾರ. ಇನ್ನೊಬ್ಬ ಅಮರಶಿಲ್ಪಿ ಜಕಣಾಚಾರಿಯನ್ನು ಕಾಣಬೇಕು ಎಂದರೆ ಎಲ್ಲರೂ ಶಿಕ್ಷಿತರಾಗಬೇಕು. ಇದೇ ಕಾರಣಕ್ಕೆ ಅಂಬೇಡ್ಕರ್‌ ಅವರು ಬರೀ ರಾಜಕೀಯ ಸ್ವಾತಂತ್ರ್ಯ ಸಿಕ್ಕರೆ ಸಾಲದು ಇದರ ಜೊತೆಗೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯಗಳು ಸಿಗಬೇಕು ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಮೇಲ್ಜಾತಿ ಜನರಿಗೂ ಮೀಸಲಾತಿ ಸೌಲಭ್ಯ ನೀಡಿದ್ದಾರೆ. ಆದರೆ ಈ ವರ್ಗದ ಜನರು ಮೀಸಲಾತಿ ಅರ್ಹರಲ್ಲ, ಕಾರಣ ಸಂವಿಧಾನದ 15 ಮತ್ತು 16ನೇ ಪರಿಚ್ಛೇದದ ಪ್ರಕಾರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಬೇಕು ಎಂದಿದೆ. ಈಗ ನೀಡಿರುವ ಮೀಸಲಾತಿ ಸಂವಿಧಾನಕ್ಕೆ ವಿರುದ್ಧವಾಗಿದೆ. ಮೀಸಲಾತಿ ಇಲ್ಲದ ಜಾತಿಗಳೇ ಇಲ್ಲ. ಇದರಿಂದ ಸಮಾನತೆ ತರಲು ಸಾಧ್ಯವೇ? ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರೂ ಮೀಸಲಾತಿ ಪಡೆಯುತ್ತಿದ್ದಾರೆ. ಮೀಸಲಾತಿ ಇರುವುದು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಹೆಚ್ಚು ಒತ್ತು ನೀಡಿ ಅವರನ್ನು ಮುಂದೆ ತರಬೇಕು ಎಂದು ತಿಳಿಸಿದರು.

ಜಾತಿ ವ್ಯವಸ್ಥೆ ಹೋಗಿ ಮನುಷ್ಯರಾಗಿ ಬದುಕುವಂತ ವ್ಯವಸ್ಥೆ ಬರಬೇಕು. ಎಲ್ಲರೂ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮುಂದೆ ಬಂದಾಗ ಮಾತ್ರ ಜಾತಿ ವ್ಯವಸ್ಥೆ ನಾಶವಾಗುತ್ತದೆ. ನಮ್ಮ ಜಾತಿ ವ್ಯವಸ್ಥೆ ಬಾವಿಯೊಳಗಿನ ಕಸದಂತೆ ಆಗಿದೆ, ನೀರು ಸೇದುವಾಗ ಕಸ ಸ್ವಲ್ಪ ದೂರ ಸರಿದು ಸ್ವಲ್ಪ ಹೊತ್ತಿನ ನಂತರ ಮತ್ತೆ ಒಂದಾಗುತ್ತದೋ ಹಾಗೆ ಸಮಾಜ ಸುಧಾರಕರು ಹೇಳಿದಾಗ ಕೊಂಚ ಬದಲಾವಣೆ ಆಗಿ, ಮತ್ತೆ ಹಿಂದಿನ ಕತೆಗೆ ಬಂದು ನಿಲ್ಲುತ್ತದೆ ಎಂದು ಅವರು ತಿಳಿಸಿದರು.

Join Whatsapp