ರಾತ್ರಿ ಕರ್ಫ್ಯೂ ತೆರವಿಗೆ ಸರಕಾರ ಚಿಂತನೆ | ಸಿ.ಎಂ ಬೊಮ್ಮಾಯಿ

Prasthutha|

ಹುಬ್ಬಳ್ಳಿ : ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ರಾತ್ರಿ ಕಫ್ರ್ಯೂ ತೆರವುಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಜಿಲ್ಲೆಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಸ್ವಲ್ಪ ಪ್ರಮಾಣದ ಏರಿಕೆ ಇರುವುದರಿಂದ ರಾತ್ರಿ ಕಫ್ರ್ಯೂ ವಿಧಿಸಲಾಗಿದೆ. ಇದನ್ನು ಹಂತ ಹಂತವಾಗಿ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.

- Advertisement -

ಜನರ ಜೀವನಕ್ಕೂ ತೊಂದರೆಯಾಗಬಾರದು. ಕೋವಿಡ್ ನಿಯಂತ್ರಣಕ್ಕೂ ಬರಬೇಕು. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ನೀಡುವ ವರದಿ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು. ಕರಾವಳಿ ತೀರ ಪ್ರದೇಶ ಹಾಗೂ ಹೆಚ್ಚು ಅರಣ್ಯ ಪ್ರದೇಶವಿರುವ ಕಡೆ ಕೇರಳದಿಂದ ಕೆಲವು ಉಗ್ರಗಾಮಿ ಸಂಘಟನೆಗೆ ಸೇರಿದ ಶಂಕಿತರು ಬಂದಿರಬಹುದೆಂಬ ಹಿನ್ನೆಲೆಯಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ ಎಂದು ಸಿಎಂ ಹೇಳಿದ್ದಾರೆ.

ಸ್ಥಳೀಯ ಪೊಲೀಸರು ರಾಷ್ಟ್ರೀಯ ತನಿಖಾ ದಳಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ವಿಶೇಷವಾಗಿ ಕೇರಳದಿಂದ ಬರುವವರ ಮೇಲೆ ನಿಗಾ ವಹಿಸಲಾಗಿದೆ. ಅದರಲ್ಲೂ ಕರಾವಳಿ ತೀರ ಪ್ರದೇಶ ಹಾಗೂ ಹೆಚ್ಚು ಅರಣ್ಯ ಪ್ರದೇಶವಿರುವ ಕಡೆ ಅನುಮಾನಾಸ್ಪದವಾಗಿ ತಿರುಗಾಡುವವರ ಮೇಲೆ ನಿಗಾ ವಹಿಸಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.



Join Whatsapp