ಕರಾವಳಿಯ ಕಂಬಳಕ್ಕೆ ಲಕ್ಷಗಳ ಅನುದಾನ : ಕಂಬಳ ಪ್ರಿಯರಿಗೊಂದು ಸಿಹಿ ಸುದ್ದಿ !

Prasthutha|

ಬೆಂಗಳೂರು: ಕರ್ನಾಟಕದ ಕರಾವಳಿ ಭಾಗದಲ್ಲಿ ಜನಪ್ರಿಯವಾಗಿರುವ ಕಂಬಳ ಕ್ರೀಡೆಗೆ ತಲಾ 5 ಲಕ್ಷ ರೂ. ನಂತೆ ಅನುದಾನ ಒದಗಿಸಲು ಸರಕಾರ ಒಪ್ಪಿಕೊಂಡಿದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆರ್.ರಾಜಶೇಖರ್ ಆದೇಶ ಹೊರಡಿಸಿದ್ದು, ತುಳುನಾಡಿನ ಜನರ ಜಾನಪದ ಕ್ರೀಡೆಯಾಗಿರುವ ಕಂಬಳಕ್ಕೆ ಅನುದಾನದ ನೀಡಬೇಕೆಂಬ ಬಹು ಕಾಲದ ಬೇಡಿಕೆಗೆ ಅಧಿಕೃತ ಮನ್ನಣೆ ದೊರೆತಂತಾಗಿದೆ. ಕಂಬಳ ಪ್ರಿಯರಿಗೆ ಇದೊಂದು ಸಿಹಿ ಸುದ್ದಿಯಾಗಿದೆ.

- Advertisement -


ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮೀಯಾರು ಕಂಬಳಕ್ಕೆ ಬಂದಿದ್ದ ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೀಶ್ವರ್ ಗೆ ಅಧಿಕೃತ ಮನವಿ ಸಲ್ಲಿಸಲಾಗಿತ್ತು. ಇದಕೆ ಧನಾತ್ಮಕವಾಗಿ ಸ್ಪಂದಿಸಿರುವ ಸಚಿವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಪ್ರತಿ ಕಂಬಳದ ಮಾಹಿತಿಯನ್ನು ಸಂಗ್ರಹಿಸಿ, ಸರಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗಾಗಿ ಕಂಬಳವನ್ನು ಪ್ರೋತ್ಸಾಹಿಸಲು ಸರಕಾರ ಈ ನಿರ್ಧಾರ ಕೈಗೊಂಡಿದೆ.

ಅದರಂತೆ ಕಂಬಳಕ್ಕೆ ಒಂದು ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡಲಾಗಿದೆ. ದಕ್ಷಿಣ ಕನ್ನಡದಲ್ಲಿ ನಡೆಯುವ 10 ಕಂಬಳಗಳಿಗೆ ತಲಾ 5 ಲಕ್ಷ ರೂಪಾಯಿಗಳ ಅನುದಾನ ಹಾಗೂ ಉಡುಪಿ ಜಿಲ್ಲೆಯಲ್ಲಿ ನಡೆಯುವ 10 ಕಂಬಳಗಳಿಗೆ ತಲಾ 5 ಲಕ್ಷ ರೂಪಾಯಿಗಳಂತೆ ಒಂದು ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.



Join Whatsapp