ಗೋಣಿಕೊಪ್ಪಲು: ಕೆಸರುಮಯವಾದ ರಸ್ತೆ; ಅಸಹಾಯಕ ಸ್ಥಿತಿಯಲ್ಲಿ ಗ್ರಾಮಸ್ಥರು

Prasthutha|

ಕೊಡಗು: ನೂರಾರು ಮನೆಗಳಿರುವ ಗೋಣಿಕೊಪ್ಪಲು ಸಮೀಪದ ದೇವರಪುರ ಗಿರಿಜನ ಹಾಡಿ ರಸ್ತೆ ಕೆಸರುಮಯವಾಗಿದ್ದು ಜನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.  ಶಾಲಾ ವಿದ್ಯಾರ್ಥಿಗಳು  ಆ ದಾರಿಯಿಂದಾಗಿಯೇ  ನಡೆದು ಹೋಗಬೇಕಿದ್ದು, ಕೆಸರಿನಲ್ಲಿ ಕಾಲುಗಳು ಹೂತು ಹೋಗಿ ನಡೆದಾಡಲು ಹರಸಾಹಸಪಡುವಂತಾಗಿದೆ. ಆದರೆ ತನಗೇನೂ ಸಂಬಂಧವೇ ಇಲ್ಲ ಎಂಬಂತೆ  ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ.

- Advertisement -

ಕೆಸರಿನಲ್ಲಿ ಚಕ್ರಗಳು ಹೂತು ಹೋಗುವ ಭಯದಿಂದ ಆಟೊ ಚಾಲಕರೂ ಇತ್ತ ಸುಳಿಯುತ್ತಿಲ್ಲ. ಪೋಷಕರು ಕೂಲಿಗೆ ಹೋಗುವ ಮುನ್ನ ಒಂದು ಕಿ.ಮೀ ದೂರ ತಮ್ಮ ಮಕ್ಕಳನ್ನು ಎತ್ತಿಕೊಂಡು ಬಂದು ರಸ್ತೆ ದಾಟಿಸುತ್ತಿದ್ದಾರೆ. ಇದರ ನಡುವೆ ರಸ್ತೆಯ ಎಡ ಬಲದಲ್ಲಿ ಕಾಡಾನೆಗಳು ಹಗಲಿನಲ್ಲಿಯೇ ರಸ್ತೆ ದಾಟುತ್ತಿರುವುದರಿಂದ ಅವುಗಳ  ಉಪಟಳಕ್ಕೇನೂ  ಕಡಿಮೆಯಿಲ್ಲ. ಆನೆಗಳು ಎದುರಾದರೆ ಕೆಸರು ರಸ್ತೆಯಲ್ಲಿ ಓಡಲು ಆಗದೇ ಜೀವ ಕೈಯಲ್ಲಿ ಹಿಡಿದು ನಡೆದಾಡುವ ಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಕಲ್ಲು ಹಾಗೂ ಹೊಂಡದಿಂದ ಕೂಡಿದ್ದ ರಸ್ತೆಗೆ ಜನರೇ ಸೇರಿಕೊಂಡು ಮಣ್ಣು ತುಂಬಿಸಿದ್ದರು. ಈಗ ಇದೇ ರಸ್ತೆ ಮಳೆಗೆ ಕೆಸರು ಮಯವಾಗಿದೆ. ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಕೂಲಿ ಕೆಲಸಕ್ಕೆ ತೆರಳುವ ಮಹಿಳೆಯರು, ಆಸ್ಪತ್ರೆಗೆ ತೆರಳುವ ವೃದ್ಧರು ಕೆಸರು ರಸ್ತೆಯಿಂದಾಗಿ ತೀರ ಬವಣೆ ಅನುಭವಿಸುತ್ತಿದ್ದು, ಗರ್ಭಿಣಿಯರು, ವೃದ್ಧರು ಹಾಗೂ ಅನಾರೋಗ್ಯಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಟೊ ಕೂಡ ಬರುತ್ತಿಲ್ಲವಾದ್ದರಿಂದ ಸಾರ್ವಜನಿಕರಿಗೆ ದಿಕ್ಕೇ ತೋಚದಂತಾಗಿದೆ.

- Advertisement -

ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಹಾಡಿಯಲ್ಲಿ ಯರವರು, ಜೇನುಕುರುಬರು ಸೇರಿದಂತೆ 200ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, ಇವರೆಲ್ಲರೂ ಕಾಫಿ ತೋಟದ ಕಾರ್ಮಿಕರಾಗಿದ್ದಾರೆ.



Join Whatsapp