ಬೆಂಗಳೂರು: ಮಕ್ಕಳಿಗೆ ಪಾಠ ಮಾಡದ, ತನಗೆ ಬೇಕಾದ ರೀತಿಯಲ್ಲಿ ಪಠ್ಯ ತಿರುಚುವ ಕೆಲಸ ಮಾಡಿ, ಮಕ್ಕಳ ಮೃದು ಮನಸ್ಸುಗಳನ್ನು ದಾರಿ ತಪ್ಪಿಸುವ ಕೆಲಸದಲ್ಲಿ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯ ರೋಹಿತ್ ಚಕ್ರತೀರ್ಥ ನಿರತರಾಗಿದ್ದಾರೆ. ಈತ ವಿಷದ ತೀರ್ಥ ನೀಡುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಪ್ರಥಮ ಪಿಯುಸಿ ಕನ್ನಡ ಪಠ್ಯ ಪುಸ್ತಕ ರಚನಾ ಸಮಿತಿಯ ಅಧ್ಯಕ್ಷ ಡಾ. ಎಂ.ಎಲ್. ಶಂಕರಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಾ.ಎಂ.ಎಲ್. ಶಂಕರಲಿಂಗಪ್ಪ, ಯಾವುದೇ ಕೆಲಸದಲ್ಲಿ ಸಮಾಜದಲ್ಲಿ ಸಾಮರಸ್ಯ ಉಳಿಸಲು ಯತ್ನಿಸಬೇಕು. ಇದು ಅಧ್ಯಾಪಕರಿಗೆ ಪ್ರಮುಖ ಧ್ಯೇಯವಾಗಬೇಕು. ಊರ ಮೇಲೆ ಊರು ಬಿದ್ರೆ ಶ್ಯಾನುಭೋಗರಿಗೆ ಏನಾಗಬೇಕು ಎನ್ನುವ ಮನಸ್ಥಿತಿಯವರಿಗೆ ಪಠ್ಯ ಪರಿಷ್ಕರಣೆ ಕೆಲಸ ನೀಡಬಾರದು ಎಂದು ಕೋರಿದ್ದಾರೆ. ಪರಿಷ್ಕರಣೆ ವಿಚಾರದಲ್ಲಿ ಈಗ ಎದ್ದಿರುವ ಕೂಗಿಗೆ ಬೆಲೆನೀಡಿ. ಇದು ಚಳವಳಿ ರೂಪ ಪಡೆದಿದೆ. ಇಂತಹ ಶಕ್ತಿಗಳು ನೀಚ ಕೆಲಸ ಮಾಡಿದ್ದರಿಂದಲೇ ಸಮಾಜದಲ್ಲಿ ತಾರತಮ್ಯ ಉಂಟಾಗುತ್ತಿದೆ. ಇಂತಹ ಶಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ. ಒಟ್ಟಾರೆ ಹೇಳುವುದಾದರೆ, ಪರಿಷ್ಕರಣೆಗೊಂಡಿರುವ ಪಠ್ಯಗಳನ್ನು ಮಕ್ಕಳಿಗೆ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಪಠ್ಯಗಳ ಆಯ್ಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯೂ ಸೇರಿದಂತೆ ಕರ್ನಾಟಕದ ಭೌಗೋಳಿಕ ವಿಭಾಗಕ್ಕೆ ಪ್ರಾತಿನಿಧ್ಯ ನೀಡುವಾಗ ಪಠ್ಯಗಳ ಆಯ್ಕೆಯಲ್ಲಿ ಅನುಸರಿಸಿದ ಕೆಲ ಅಂಶಗಳ ಬಗ್ಗೆ ಸಮಿತಿ ಅಧ್ಯಕ್ಷರಾಗಿ ವ್ಯಾಪಕ ಪರಿಶೀಲನೆ ನಡೆಸಲಾಗಿದೆ. ವಿದ್ಯಾರ್ಥಿಗಳ ವಯಸ್ಸು, ಮನಸ್ಸು, ಅವರ ಭವಿಷ್ಯಕ್ಕೆ ನೆರವಾಗುವ ಅಂಶಗಳು, ಕಾಯಕದ ಶ್ರೇಷ್ಠತೆ, ಆರೋಗ್ಯ, ಊಟ, ವ್ಯಸನ, ಮಕ್ಕಳ ಸಾವಿನಿಂದ ಪೋಷಕರಿಗೆ ಆಗುವ ಸಹಿಲಸದಳವಾದ ಶೋಕ, ಇತ್ಯಾದಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
ನಮ್ಮ ಸಮಿತಿಯ ಸದಸ್ಯರೆಲ್ಲರನ್ನು ಒಮ್ಮತಕ್ಕೆ ತಂದು ಮೇಲಿನ ಅಂಶಗಳು ಒಳಗೊಳ್ಳುವಂತಹ ಸಮಗ್ರ ಪಠ್ಯ ಪುಸ್ತಕ ಸಿದ್ಧಪಡಿಸಿ ಇಲಾಖೆಗೆ ಒಪ್ಪಿಸಲು ಸರಿಸುಮಾರು ವರ್ಷವೇ ಹಿಡಿಯಿತು. ಪ್ರವಾಸಮಾಡಿದೆವು. ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಕರ್ತವ್ಯನಿರತರಾದ ನಾವು, ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕಾಗಿ ನೆರವಾಗುವ ಪಠ್ಯಗಳ ಆಯ್ಕೆ ನಮಗೆ ಸರಳವಾಗಿರಲಿಲ್ಲ. ತುಂಬಾ ಶ್ರಮ ವಹಿಸಿ ಕೆಲಸ ಮಾಡಿದ್ದೇವೆ ಎಂದು ಡಾ.ಎಂ.ಎಲ್. ಶಂಕರಲಿಂಗಪ್ಪ ಹೇಳಿದ್ದಾರೆ.