ಧಾರ್ಮಿಕ ಸಮಾರಂಭಗಳಿಗೆ ಟೋಪಿ, ನಾಮ ಹಾಕಿಕೊಂಡು ಹೋಗಿ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಚಿಂತನೆ ಬಿಟ್ಟುಬಿಡಿ: ಯು.ಟಿ.ಖಾದರ್ ವಿರುದ್ಧ ರಿಯಾಝ್ ಕಡಂಬು ವಾಗ್ದಾಳಿ

Prasthutha|

ಉಳ್ಳಾಲ: ಧಾರ್ಮಿಕ ಸಮಾರಂಭಗಳಿಗೆ ಟೋಪಿ, ನಾಮ, ಶಾಲು ಹಾಕಿಕೊಂಡು ಹೋಗಿ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಚಿಂತನೆಯನ್ನು ಬಿಟ್ಟುಬಿಡಿ. ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಜನರ ಪರವಾಗಿ ಧ್ವನಿ ಎತ್ತುವ ಎಸ್’ಡಿಪಿಐ ಅನ್ನು ಈ ಬಾರಿಯ ಚುನಾವಣೆಯಲ್ಲಿ ಮತದಾರರು ಗೆಲ್ಲಿಸಲಿದ್ದಾರೆ ಎಂದು ಎಸ್’ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಹೇಳಿದ್ದಾರೆ.

- Advertisement -


ಉಳ್ಳಾಲ ನಗರಸಭೆಯ ಭ್ರಷ್ಟಾಚಾರದ ವಿರುದ್ಧ ಎಸ್’ಡಿಪಿಐ ವತಿಯಿಂದ ಗುರುವಾರ ಉಳ್ಳಾಲ ನಗರ ಸಭೆ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಕ್ಷೇತ್ರದ ಶಾಸಕರು ದ್ವೇಷ ರಾಜಕಾರಣ, ಹಗೆ ತೀರಿಸುವ ರಾಜಕಾರಣ ಮಾಡುತ್ತಿದ್ದಾರೆ. ನಗರಸಭೆಯಲ್ಲಿರುವ ಎಸ್’ಡಿಪಿಐ ಮತ್ತು ಜೆಡಿಎಸ್ ಕೌನ್ಸಿಲರ್’ಗಳನ್ನು ಅಭಿವೃದ್ಧಿ ವಿಷಯಗಳಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ. ಅಭಿವೃದ್ಧಿ ಕಾಮಗಾರಿ ವಿಷಯಗಳಲ್ಲಿ ಸತಾಯಿಸುತ್ತಿರುವುದು ಕೂಡ ನಡೆದಿದೆ. ಪಕ್ಷಾತೀತವಾಗಿ ನಡೆಯಬೇಕಾದ ನಗರಸಭೆಯ ಆಡಳಿತವನ್ನು ಶಾಸಕರು ತನ್ನ ಕೈಬೆರಳ ತುದಿಯಲ್ಲಿ ಆಡಿಸಲು ನೋಡುತ್ತಿದ್ದಾರೆ. ಇದು ಹೆಚ್ಚು ದಿನ ನಡೆಯಲು ಸಾಧ್ಯವಿಲ್ಲ. ಈಗಾಗಲೇ ಕ್ಷೇತ್ರದಲ್ಲಿ ನಡೆದ ಪುದು ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಇದನ್ನು ಸಾಬೀತುಪಡಿಸಿದೆ ಎಂದು ಹೇಳಿದರು.
ನಗರ ಸಭೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಇಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿವೆ. ಸರ್ಕಾರಿ ಸೌಲಭ್ಯಗಳಿಗಾಗಿ ಜನರು ಅರ್ಜಿ ಹಿಡಿದು ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಬಾರಿ ಇಲ್ಲಿನ ಜನರು ಅರ್ಜಿ ಹಿಡಿದು ನಿಮ್ಮ ಮುಂದೆ ಬೇಡಲು ಅವರಿಗೂ ಸಮಯವಿಲ್ಲ ಎಂದು ಹೇಳಿದ ರಿಯಾಝ್, ಕಲುಷಿತ ನೀರು, ತ್ಯಾಜ್ಯ ರಾಶಿಯ ಮಧ್ಯೆಯೇ ಜನರು ಬದುಕುವ ವಾತಾವರಣ ಇಲ್ಲಿದೆ. ಇದರಿಂದ ರೋಸಿ ಹೋಗಿರುವ ಕ್ಷೇತ್ರದ ಜನರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.


ಶಾಸಕರ ಚೇಲಾಗಳು, ವಾಟ್ಸಪ್ ವೀರರು ನಂಬರ್ -1 ಶಾಸಕ ಎಂದು ಹೇಳಿದ ತಕ್ಷಣ ನಂಬರ್ ಒನ್ ಆಗುವುದಿಲ್ಲ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ, ಜನರಿಗೆ ಸ್ಪಂದಿಸುವ ವಿಚಾರದಲ್ಲಿ ನಂಬರ್ ಒನ್ ಆಗಬೇಕು ಎಂದು ಶಾಸಕ ಯು.ಟಿ.ಖಾದರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಉಳ್ಳಾಲ ಕ್ಷೇತ್ರದ ಜನರ ಪರವಾಗಿ ಧ್ವನಿ ಎತ್ತುವ, ಜನರ ಕಷ್ಟಗಳಿಗೆ ಸ್ಪಂದಿಸುವ, ಅವರ ನೋವನ್ನು ಅರ್ಥ ಮಾಡಿಕೊಳ್ಳುವ, ಯಾವುದೇ ಬೇನಾಮಿ ಆಸ್ತಿಗಳಿಲ್ಲದ ರಿಯಾಝ್ ಫರಂಗಿಪೇಟೆಯವರನ್ನು ಕ್ಷೇತ್ರದ ಜನರು ವಿಧಾನಸಭೆಗೆ ಕಳುಹಿಸಿದರೆ ಅವರು ಕ್ಷೇತ್ರವನ್ನು ನಂಬರ್ ಒನ್ ಕ್ಷೇತ್ರವಾಗಿ ಮಾಡಲಿದ್ದಾರೆ ಎಂದು ಹೇಳಿದರು.
ಅಧಿಕಾರಿಗಳು ನಿಯಮಾನುಸಾರ ಕರ್ತವ್ಯ ನಿರ್ವಹಿಸಬೇಕೇ ಹೊರತು ಅಕ್ರಮ, ಭ್ರಷ್ಟಾಚಾರಗಳಿಗೆ ಸಾಥ್ ನೀಡಿದರೆ ಮುಂದಿನ ದಿನಗಳಲ್ಲಿ ನೀವು ಕೂಡ ಕಾನೂನಿನ ಕುಣಿಕೆಗೆ ತಲೆ ಕೊಡಬೇಕಾಗುತ್ತದೆ ಎಂದು ರಿಯಾಝ್ ಕಡಂಬು ಎಚ್ಚರಿಕೆ ನೀಡಿದರು.

- Advertisement -


ಪ್ರತಿಭಟನೆಯಲ್ಲಿ ಎಸ್’ಡಿಪಿಐ ಉಳ್ಳಾಲ ನಗರ ಸಭಾ ಅಧ್ಯಕ್ಷ ಎ.ಆರ್. ಅಬ್ಬಾಸ್, ಉಳ್ಳಾಲ ಜಿಲ್ಲಾ ಸಮಿತಿ ಸದಸ್ಯರಾದ ಸುಹೈಲ್, ಕೌನ್ಸಿಲರ್’ಗಳಾದ ರಮೀಝ್ ಉಳ್ಳಾಲ, ಎಸ್’ಡಿಪಿಐ ನಗರಸಭಾ ಉಪಾಧ್ಯಕ್ಷ ಇಮ್ತಿಯಾಝ್ ಕೋಟೆಪುರ, ಎಸ್’ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರದ ಮಾಧ್ಯಮ ಉಸ್ತುವಾರಿ ರಿಝ್ವಾನ್ ಸಜೀಪ ಮತ್ತಿತರರು ಉಪಸ್ಥಿತರಿದ್ದರು.



Join Whatsapp