ಭಗವದ್ಗೀತೆ ಕೇವಲ ಧಾರ್ಮಿಕ ಗ್ರಂಥವಲ್ಲ, ತತ್ವಶಾಸ್ತ್ರ: ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ

Prasthutha|

ನವದೆಹಲಿ: ಮುಂಬರುವ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸುವ ಗುಜರಾತ್ ಸರ್ಕಾರದ ನಿರ್ಧಾರವನ್ನು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಹಂಗಾಮಿ ಅಧ್ಯಕ್ಷ ಸೈಯದ್ ಶಹಝಾದ್ ಶ್ಲಾಘಿಸಿದ್ದು, ಭಗವದ್ಗೀತೆ ಕೇವಲ ಧಾರ್ಮಿಕ ಗ್ರಂಥವಲ್ಲ, ಬದಲಾಗಿ ತತ್ವಶಾಸ್ತ್ರ ಮತ್ತು ಪವಿತ್ರ ಗ್ರಂಥವಾಗಿದೆ ಎಂದು ತಿಳಿಸಿದ್ದಾರೆ.

- Advertisement -

NCM ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಗವದ್ಗೀತೆಯನ್ನು ತತ್ವಶಾಸ್ತ್ರದ ದೃಷ್ಟಿಕೋನದಿಂದ ನೋಡಬೇಕಾಗಿದೆ. ಸದ್ಯ ಗೀತೆಯ ಬಗ್ಗೆ ವಿದೇಶದಲ್ಲೂ ಅಧ್ಯಯನ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಶಾಲಾ ಪಠ್ಯಕ್ರಮದಲ್ಲಿ ಕುರಾನ್ ಅಥವಾ ಇತರ ಧಾರ್ಮಿಕ ಪಠ್ಯಗಳನ್ನು ಪರಿಚಯಿಸಲು ಏಕೆ ಪ್ರಸ್ತಾಪಿಸುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಾವು ಯಾರನ್ನೂ ತಡೆಯುವುದಿಲ್ಲ. ಪರಸ್ಪರರ ಧರ್ಮದ ಬಗ್ಗೆ ಗೌರವ ಹೆಚ್ಚಬೇಕು ಎಂದು ಬಯಸುತ್ತೇವೆ. ಎಲ್ಲಾ ಧರ್ಮಗಳ ಪುಸ್ತಕಗಳು ಲಭ್ಯವಾಗಬೇಕೆಂದು ಬಯಸುತ್ತೇವೆ. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವಾಲಯಕ್ಕೆ ಹಲವು ಶಿಫಾರಸುಗಳನ್ನು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

- Advertisement -

2022-23ರ ಶೈಕ್ಷಣಿಕ ವರ್ಷದಿಂದ ರಾಜ್ಯಾದ್ಯಂತ 6 ರಿಂದ 12 ನೇ ತರಗತಿಗಳಿಗೆ ಭಗವದ್ಗೀತೆ ಶಾಲಾ ಪಠ್ಯಕ್ರಮದ ಭಾಗವಾಗಲಿದೆ ಎಂದು ಗುಜರಾತ್ ಸರ್ಕಾರ ಕಳೆದ ವಾರ ರಾಜ್ಯ ವಿಧಾನಸಭೆಯಲ್ಲಿ ಘೋಷಿಸಿತು.

ಮಾತ್ರವಲ್ಲ ಇತ್ತೀಚೆಗೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಪರಿಚಯಿಸುವ ಕುರಿತು ಮುಂದಿನ ದಿನಗಳಲ್ಲಿ ನಿರ್ಧಾರ ಪ್ರಕಟಿಸಲಾಗುವುದೆಂದು ತಿಳಿಸಿದ್ದರು.

Join Whatsapp