ಬೆಂಗಳೂರು: ಅಗ್ಗದ ದರದ ಲಿಪ್ ಸ್ಟಿಕ್ ಆಸೆಗೆ ಬಿದ್ದ ಯುವತಿಯೊಬ್ಬರು ಬರೋಬ್ಬರಿ ಮೂರೂವರೆ ಲಕ್ಷ ರೂ. ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಹೆಬ್ಬಾಳದಲ್ಲಿ ನಡೆದಿದೆ.
ಹೆಬ್ಬಾಳದ ನಾಗೇನಹಳ್ಳಿಯ ಯುವತಿಯೊಬ್ಬರಿಗೆ ಆನ್ ಲೈನ್ ಡೆಲಿವರಿ ಕಂಪನಿಯಿಂದ ಮಾತನಾಡುತ್ತಿದ್ದೇವೆ ಎಂದು ಅಪರಿಚಿತ ವ್ಯಕ್ತಿಯೊಬ್ಬ ಕಾಲ್ ಮಾಡಿದ್ದ. ಹಾಗೇ ಮಾತು ಮುಂದುವರಿಸಿ, ನಮ್ಮಲ್ಲಿ ನೂರು ರೂ. ಲಿಪ್ ಸ್ಟಿಕ್ ಬುಕ್ ಮಾಡಿದರೆ, ಲಕ್ಷಾಂತರ ರೂ ಬಹುಮಾನ ಗೆಲ್ಲಬಹುದು ಎಂದು ನಂಬಿಕೆ ಹುಟ್ಟಿಸಿದ್ದಾನೆ. ಆತನ ಮಾತನ್ನು ನಂಬಿದ ಯುವತಿಯ ನೂರು ರೂಪಾಯಿ ತಾನೇ ಎಂದು ಓಕೆ ಎಂದಿದ್ದರು.
ನೂರು ರೂ. ಬೆಲೆಯ ಲಿಪ್ ಸ್ಟಿಕ್ ಬುಕ್ ಮಾಡಿದ ಯುವತಿಗೆ ಕೆಲ ನಿಮಿಷದಲ್ಲೇ ಆ ಕಡೆಯಿಂದ ಅಪರಿಚಿತ ಕಾಲ್ ಮಾಡಿದ್ದ. ಮೇಡಂ ನಿಮಗೆ ಒಂದು ಲ್ಯಾಪ್ ಟಾಪ್ ಮತ್ತು ಐಫೋನ್ ಬಂಪರ್ ಬಹುಮಾನ ಬಂದಿದೆ ಅಂದಿದ್ದ. ಈ ಮಾತು ಕೇಳಿದ ಯುವತಿ ಫುಲ್ ಖುಷಿ ಆಗಿ ಥ್ಯಾಂಕ್ ಯೂ ಸರ್ ಅಂದಿದ್ದರು. ಆಗ ಆ ಅಪರಿಚಿತ ವ್ಯಕ್ತಿ ನೀವೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಒಂದು ಲಿಂಕ್ ಕಳಿಸುತ್ತೇವೆ ಅದನ್ನು ಓಕೆ ಮಾಡಿ ಅಂದಿದ್ದ. ಯುವತಿ ಆ ಲಿಂಕ್ ಓಕೆ ಮಾಡಿದ್ದಾಳೆ. ಅಷ್ಟೇ ಕ್ಷಣಮಾತ್ರದಲ್ಲೇ ಆ ಯುವತಿ ಅಕೌಂಟ್ ನಲ್ಲಿದ್ದ ಮೂರೂ ಲಕ್ಷದ ಮೂವತ್ತೆಂಟು ಸಾವಿರ ರೂ. ಡೆಬಿಟ್ ಆಗಿದೆ ಎಂದು ಬ್ಯಾಂಕ್ ಕಡೆಯಿಂದ ಮಸೇಜ್ ಬಂದಿತ್ತು. ಮಸೇಜ್ ನೋಡಿ ದಂಗಾಗಿ ಯುವತಿಯು ವಂಚನೆಗೊಳಗಾದ ಸಂಬಂಧ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.