ಒಡಿಶಾ: ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತದ ಹೋರಾಟ ಸೆಮಿಫೈನಲ್’ನಲ್ಲಿ ಅಂತ್ಯಕಂಡಿದೆ. ನಾಕೌಟ್ ಹೋರಾಟದ ಎಲ್ಲಾ ವಿಭಾಗಗಳಲ್ಲೂ ಪ್ರಾಬಲ್ಯ ಸಾಧಿಸಿದ ಆರು ಬಾರಿಯ ಚಾಂಪಿಯನ್ ಜರ್ಮನಿ, 2-4 ಗೋಲುಗಳ ಅಂತರದಲ್ಲಿ ಭಾರತದ ಸವಾಲನ್ನು ಮೆಟ್ಟಿನಿಂತು ಫೈನಲ್ ಪ್ರವೇಶಿಸಿತು. ಈ ಸೋಲಿನೊಂದಿಗೆ ಭಾರತ, ಕಿರಿಯರ ಹಾಕಿ ತಂಡ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ.
ಕಂಚಿನ ಪದಕಕ್ಕಾಗಿ ಭಾನುವಾರ ನಡೆಯುವ ಪಂದ್ಯದಲ್ಲಿ ಭಾರತ, ಫ್ರಾನ್ಸ್ ತಂಡದ ಸವಾಲನ್ನು ಎದುರಿಸಲಿದೆ. ಲೀಗ್ ಹಂತದಲ್ಲಿ ತಾನು ಆಡಿದ ಮೊದಲ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಭಾರತ 4-5 ಗೋಲುಗಳ ಅಂತರದಲ್ಲಿ ಶರಣಾಗಿತ್ತು.
ಭುಬನೇಶ್ವರದ ಕಾಳಿಂಗ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದ ಆರಂಭದಿಂದಲೂ ಬಲಿಷ್ಠ ಜರ್ಮನಿ ಭಾರತದ ಮೇಲೆ ಸವಾರಿ ಮಾಡಿತ್ತು. ಜರ್ಮನಿ ಪರ ಪಂದ್ಯದ 15ನೇ ನಿಮಿಷದಲ್ಲಿ ಎರಿಕ್ ಕ್ಲೈನಿನ್, 21ನೇ ನಿಮಿಷದಲ್ಲಿ ಅರೊನ್ ಫ್ಲಾಟ್ಟೆನ್, 24ನೇ ನಿಮಿಷದಲ್ಲಿ ನಾಯಕ ಹನ್ನೇಸ್ ಮುಲ್ಲರ್ ಹಾಗೂ 25ನೇ ನಿಮಿಷದಲ್ಲಿ ಕ್ರಸ್ಟೋಫರ್ ಕುಟ್ಟರ್ ಗೋಲು ದಾಖಲಿಸುವ ಮೂಲಕ ಜರ್ಮನಿ 8ನೇ ಬಾರಿ ಫೈನಲ್ ಫೈಟ್’ಗೆ ಅರ್ಹತೆ ಪಡೆಯಿತು.
ಭಾರತದ ಪರ 25ನೇ ನಿಮಿಷದಲ್ಲಿ ಉತ್ತಮ್ ಸಿಂಗ್ ಹಾಗೂ 60ನೇ ನಿಮಿಷದಲ್ಲಿ ಬೊಬಿ ಸಿಂಗ್ ಮೂಲಕ ಎರಡು ಗೋಲು ಗಳಿಸಲು ಮಾತ್ರ ಶಕ್ತರಾದರು.
ಪ್ರಶಸ್ತಿಗಾಗಿ ಜರ್ಮನಿ-ಅರ್ಜೆಂಟೀನಾ ಪೈಪೋಟಿ !
ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಪೆನಾಲ್ಟಿ ಕಾರ್ನರ್ನಲ್ಲಿ 3-1 ಅಂತರದಿಂದ ಗೆಲುವು ಸಾಧಿಸಿರುವ ಅರ್ಜೆಂಟೀನಾ ತಂಡ ಫೈನಲ್ಗೆ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಜರ್ಮನಿ-ಅರ್ಜೆಂಟೀನಾ ನಡುವೆ ರೋಚಕ ಹಣಾಹಣಿ ನಡೆಯುವ ನಿರೀಕ್ಷೆಯಿದೆ. .