ನಾಸಿರ್, ಜುನೈದ್ ಕುಟುಂಬವನ್ನು ಕೊನೆಗೂ ಭೇಟಿಯಾದ ಗೆಹ್ಲೋಟ್

Prasthutha|


ಜೈಪುರ: ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹರಿಯಾಣದಲ್ಲಿ ಗೋರಕ್ಷಕರಿಂದ ಕೊಲ್ಲಲ್ಪಟ್ಟ ನಾಸಿರ್ ಮತ್ತು ಜುನೈದ್ ಅವರ ಭರತ್’ಪುರ ಜಿಲ್ಲೆಯಲ್ಲಿನ ಮನೆಗಳಿಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ, ಸರಕಾರದ ನೆರವನ್ನು ಹಸ್ತಾಂತರಿಸಿದರು.

- Advertisement -


ನಾಸಿರ್ ಪತ್ನಿ ಮತ್ತು ಮಗಳಿಗೆ ಒಂದೊಂದು ಲಕ್ಷ ರೂ. ಹಾಗೂ ಪತ್ನಿ, ಮಗಳ ಹೆಸರಿನಲ್ಲಿ ರೂ. 4 ಲಕ್ಷ ರೂಪಾಯಿ ಠೇವಣಿ ಇಡಲಾಯಿತು.
ಅದೇ ರೀತಿ ಜುನೈದ್ ಅವರ ಪತ್ನಿ, ಮಕ್ಕಳಿಗೆ ಒಂದೊಂದು ಲಕ್ಷ ರೂಪಾಯಿ ಪರಿಹಾರ ನೀಡಿ, ಆರು ಮಕ್ಕಳ ಹೆಸರಿನಲ್ಲಿ ರೂ. 4 ಲಕ್ಷ ಠೇವಣಿ ಇಡುವ ವ್ಯವಸ್ಥೆ ಮಾಡಲಾಯಿತು.


ಎಲ್ಲವೂ ಸೇರಿ ನಾಸಿರ್ ಕುಟುಂಬಕ್ಕೆ ರೂ. 10 ಲಕ್ಷ ಹಾಗೂ ಜುನೈದ್ ಕುಟುಂಬಕ್ಕೆ ರೂ. 35 ಲಕ್ಷ ರೂಪಾಯಿ ಸರಕಾರದ ಪರಿಹಾರ ನೀಡಿರುವುದಾಗಿ ಹೇಳಲಾಗಿದೆ.
ಭರತ್’ಪುರ ಜಿಲ್ಲೆಯ ಪಹಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಗಟ್ಮೀಕ ಗ್ರಾಮಕ್ಕೆ ಭೇಟಿ ನೀಡಿದ ಗೆಹ್ಲೋಟ್ ಅವರು ಆ ಎರಡು ಕುಟುಂಬದ 35ರಷ್ಟು ಜನರನ್ನು ಭೇಟಿ ಮಾಡಿದರು. ಜುನೈದ್ ಅವರ 6 ಮಂದಿ ಮಕ್ಕಳನ್ನೂ ಮಾತನಾಡಿಸಿದರು.

- Advertisement -


ಆರ್’ಪಿಸಿಸಿ ಅಧ್ಯಕ್ಷರಾದ ಗೋವಿಂದ್ ಸಿಂಗ್ ದೋತ್ಸಾರ, ಸಿ ಎಸ್ ಉಷಾ ಶರ್ಮಾ, ಎಡಿಜಿ ಉಮೇಶ್ ಮಿಶ್ರಾ ಮುಖ್ಯಮಂತ್ರಿಗಳ ಜೊತೆಗಿದ್ದರು.
ಹರಿಯಾಣದಲ್ಲಿ ನಡೆದ ರಾಜಸ್ತಾನದ ಯುವಕರಾದ ನಾಸಿರ್ ಮತ್ತು ಜುನೈದ್ ಕೊಲೆಯು ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ಎಐಎಂಐಎಂ ನಾಯಕ ಸಂಸದ ಅಸದುದ್ದೀನ್ ಉವೈಸಿಯವರು ದೇಶದ ನಾನಾ ಕಡೆ ಈ ಬಗ್ಗೆ ಸಭೆಗಳನ್ನು ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಭರತ್’ಪುರಕ್ಕೆ ಬಂದಿದ್ದ ಅಸದುದ್ದೀನ್ ಅವರು ಬಿಜೆಪಿ, ಕಾಂಗ್ರೆಸ್ ಎರಡನ್ನೂ ಟೀಕಿಸಿದ್ದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೂಡ ಸಂತ್ರಸ್ತ ಕುಟುಂಬವನ್ನು ಇತ್ತೀಚೆಗೆ ಭೇಟಿ ಮಾಡಿ ಸಾಂತ್ವನ ಹೇಳಿದೆ. ಪಕ್ಷದ ವತಿಯಿಂದ ಹಲವೆಡೆ ಪ್ರತಿಭಟನೆ ನಡೆಸಿ ಹತ್ಯೆಯ ಆರೋಪಿಗಳು ಮತ್ತು ಸೂತ್ರಧಾರರನ್ನು ಬಂಧಿಸುವಂತೆ ಒತ್ತಾಯಿಸಲಾಗಿತ್ತು.
ಭರತ್’ಪುರ ಜಿಲ್ಲೆಯ ಕಮನ್, ಪಹಾಡಿ, ನಗರ್ ವಲಯಗಳಲ್ಲಿ ಎರಡು ದಿನ ಮೊಬೈಲ್ ಇಂಟರ್’ನೆಟ್ ಅನ್ನು ನಿಲ್ಲಿಸಲಾಗಿತ್ತು. ಗೆಹ್ಲೋಟ್ ಅವರು ಗಟ್ಮೀಕ ಗ್ರಾಮಕ್ಕೆ ಬಂದಾಗ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಆ ಊರಿಗೆ ಹೋಗಲು ಹೊರಗಿನ ಯಾರಿಗೂ ಅವಕಾಶ ನೀಡಿರಲಿಲ್ಲ.
ಹೆಲಿಪ್ಯಾಡ್ ಬಳಿಯೇ ಕುಟುಂಬದವರನ್ನು ಮುಖ್ಯಮಂತ್ರಿಗಳು ಭೇಟಿ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಸ್ಥಳೀಯ ಶಾಸಕಿ ಜಾಹಿದಾ ಖಾನ್ ಅವರು ಮುಖ್ಯಮಂತ್ರಿಗಳ ಆಗಮನ, ನಿರ್ಗಮನ ಬಗ್ಗೆ ಸಂಪೂರ್ಣ ವ್ಯವಸ್ಥೆಯ ಜವಾಬ್ದಾರಿ ನಿರ್ವಹಿಸಿದರು.

Join Whatsapp