ಬಿಲ್ಕೀಸ್ ದಾದಿಯನ್ನು ‘ಅದ್ಭುತ ಮಹಿಳೆ’ ಎಂದು ಗುರುತಿಸಿದ ಹಾಲಿವುಡ್ ತಾರೆ ಗ್ಯಾಡೊಟ್

Prasthutha|

ಹಾಲಿವುಡ್ ತಾರೆ ಮತ್ತು ‘ವಂಡರ್ ವುಮನ್ 1994’ (ಅದ್ಭುತ ಮಹಿಳೆ 1994) ಖ್ಯಾತಿಯ ಗಾಲ್ ಗ್ಯಾಡೊಟ್,  ಸಿ.ಎ.ಎ- ಎನ್.ಆರ್.ಸಿ ವಿರೋಧಿ ಹೋರಾಟಗಾರ್ತಿ ಬಿಲ್ಕಿಸ್ ದಾದಿಯನ್ನು ತನ್ನ ವೈಯಕ್ತಿಕ ಅದ್ಭುತ ಮಹಿಳೆಯರಲ್ಲಿ ಒಬ್ಬರು ಎಂಬುದಾಗಿ ಕರೆದಿದ್ದಾರೆ. ತನ್ನ ಮೇಲೆ ಪ್ರಭಾವ ಬೀರಿದ ಜೀವನದ ಹಲವು ಕ್ಷೇತ್ರಗಳ ಮಹಿಳೆಯರನ್ನು ಗ್ಯಾಡೊಟ್ ಗುರುವಾರದಂದು ಆರಿಸಿದ್ದಾರೆ.

- Advertisement -

“ನನ್ನ ವೈಯಕ್ತಿಕ ಅದ್ಭುತ ಮಹಿಳೆಯರಿಗೆ ಪ್ರೀತಿಯೊಂದಿಗೆ ನಾನು 2020ನೆ ವರ್ಷಕ್ಕೆ ವಿದಾಯ ಹೇಳುತ್ತಿದ್ದೇನೆ; ಅವರಲ್ಲಿ ಕೆಲವರು ನನಗೆ ಬಹಳ ಹತ್ತಿರದವರು – ನನ್ನ ಕುಟುಂಬಿಕರು, ನನ್ನ ಸ್ನೇಹಿತರು – ಕೆಲವರು ನಾನು ಬಹಿರಂಗಪಡಿಸಲು ಬಯಸುವ ಸ್ಫೂರ್ತಿದಾಯಕ ಮಹಿಳೆಯರು ಮತ್ತು ಕೆಲವರು ನಾನು ಭವಿಷ್ಯದಲ್ಲಿ ಭೇಟಿಯಾಗ ಬಯಸುವ ಅಸಾಧಾರಣಾ ಮಹಿಳೆಯರಾಗಿದ್ದಾರೆ” ಎಂದು ಅವರು ಬರೆದಿದ್ದಾರೆ.

ಗ್ಯಾಡೊಟ್ ರ ಕುಟುಂಬ, ಸ್ನೇಹಿತರು, ಯುವ ಹುಡುಗಿಯರು ಮತ್ತು ಇತರ ಮಹಿಳಾ ವ್ಯಕ್ತಿಗಳನ್ನೊಳಗೊಂಡ ಕೆಲವೇ ಮಹಿಳೆಯರ ಪಟ್ಟಿಯಲ್ಲಿ ಬಿಲ್ಕೀಸ್ ದಾದಿ ಸ್ಥಾನ ಪಡೆದಿದ್ದಾರೆ.

- Advertisement -

ಬಿಲ್ಕೀಸ್ ದಾದಿಯ ಚಿತ್ರವನ್ನು ಇನ್ ಸ್ಟಾಗ್ರಂನಲ್ಲಿ ಹಂಚಿಕೊಂಡ ಗ್ಯಾಡೊಟ್, “ಭಾರತದಲ್ಲಿ ಮಹಿಳೆಯರ ಸಮಾನತೆಗಾಗಿ ಹೋರಾಡುತ್ತಿರುವ 82ರ ಹರೆಯದ ಈ ಹೋರಾಟಗಾರ್ತಿ ನೀವು ನಂಬಿಕೆಯಿಟ್ಟಿರುವುದಕ್ಕಾಗಿ ಹೋರಾಡಲು ಎಂದಿಗೂ ತಡವಾಗಿಲ್ಲ ಎಂದು ನನಗೆ ತೋರಿಸಿಕೊಟ್ಟಿದ್ದಾರೆ” ಎಂದು ಬರೆದಿದ್ದಾರೆ.

82ರ ಹರೆಯದ ಬಿಲ್ಕೀಸ್ ದಾದಿಯೆಂದೇ ಖ್ಯಾತರಾದ ಬಿಲ್ಕೀಸ್ ಬಾನು  ಸಿ.ಎ.ಎ- ಎನ್.ಆರ್.ಸಿ ವಿರುದ್ಧ ಸುಮಾರು ಮೂರು ತಿಂಗಳುಗಳ ಕಾಲ ಶಾಹೀನ್ ಬಾಗ್ ನಲ್ಲಿ ಟೆಂಟ್ ನಡಿ ಹೋರಾಟ ಮಾಡಿದ್ದರು.



Join Whatsapp