ಗದಗ: ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸವರ್ಣೀಯ ವ್ಯಕ್ತಿಯೊಬ್ಬ ದಲಿತ ವಿಧವೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿರುವ ಘಟನೆ ಗದಗ ಜಿಲ್ಲೆಯ ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆಂದು ನರಗುಂದ ಠಾಣೆಯ ಇನ್ಸ್ ಪೆಕ್ಟರ್ ಜಯಂತ್ ಗೌಳಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಸೇರಿದ ಸಂಗೀತ ಎಂಬ ವಿಧವೆಯ ಮೇಲೆ ಅವರ ಬಾಡಿಗೆ ಮನೆಯಲ್ಲಿ ವಾಸವಿರುವ ಮೇಲ್ವರ್ಗದ ಚಂದ್ರೇಗೌಡ ಕಣ್ಣೂರು ಎಂಬಾತ ಅವಾಚ್ಯ ಶಬ್ದಗಳನ್ನು ನಿಂದಿಸಿ ಹಲ್ಲೆ ನಡೆಸಿದ್ದಾನೆ. ಘಟನೆಯ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಮಧ್ಯೆ ಸಂತ್ರಸ್ತೆ ತನ್ನ ಅಳಲನ್ನು ಸಾರ್ವಜನಿಕರಲ್ಲಿ ತೋಡಿಕೊಂಡಿದ್ದು, ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.
ಆರೋಪಿ ಚಂದ್ರೇಗೌಡ ಎಂಬಾತ ದಲಿತ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಆಕೆಯ ಮಕ್ಕಳ ಎದುರಲ್ಲಿಯೇ ದೈಹಿಕವಾಗಿ ಹಲ್ಲೆ ನಡೆಸಿರುವುದು ವೈರಲ್ ವೀಡಿಯೋದಲ್ಲಿ ಸೆರೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ, ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸದ್ಯ ಆರೋಪಿ ಚಂದ್ರೇಗೌಡ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News