ಬೆಂಗಳೂರು: ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದ ಮೇಕೆದಾಟು ಪಾದಯಾತ್ರೆ ಮತ್ತೆ ಆರಂಭಿಸಲು ಕಾಂಗ್ರೆಸ್ ಸಜ್ಜಾಗಿದೆ. ನಾಳೆ ಬೆಳಗ್ಗೆ 9 ಗಂಟೆಗೆ ತಾಯಿ ಚಾಮುಂಡೇಶ್ವರಿಗೆ ಪೂಜೆ ನಂತರ ಪಾದಯಾತ್ರೆ ಆರಂಭವಾಗಲಿದ್ದು, ಮಾರ್ಚ್ 3 ರಂದು ಮಧ್ಯಾಹ್ನ ಪಾದಯಾತ್ರೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನ ತಲುಪಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಬಗ್ಗೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗರೀಕರಿಗೆ ಕುಡಿಯುವ ನೀರು ಪೂರೈಸಲು, ಕಾವೇರಿ ಪ್ರದೇಶದ ರೈತರನ್ನು ಬದುಕಿಸಲು ನೀರಿಗಾಗಿ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮೇಕೆದಾಟುವಿನಿಂದ ರಾಮನಗರದವರೆಗೆ ಪಾದಯಾತ್ರೆ ಮಾಡಿದ್ದೆವು. ಈ ಮಧ್ಯೆ ಕೋವಿಡ್ ಮೂರನೇ ಅಲೆ ಸಂದರ್ಭದಲ್ಲಿ ಜನರ ಆರೋಗ್ಯ, ಕೋರ್ಟ್ ಆದೇಶಕ್ಕೆ ಗೌರವ ಸೂಚಿಸಲು ಈ ಪಾದಯಾತ್ರೆಯನ್ನು ನಿಲ್ಲಿಸಿದ್ದೆವು. ಎಲ್ಲಿ ನಿಲ್ಲಿಸಿದ್ದೇವೋ ಈಗ ಅಲ್ಲಿಂದ ಮತ್ತೆ ಆರಂಭಿಸುತ್ತಿದ್ದೇವೆ. ಇದು ಪಕ್ಷಾತೀತ ಹೋರಾಟ. ಈ ಹೋರಾಟದ ಮುಂದಾಳತ್ವವನ್ನು ಕಾಂಗ್ರೆಸ್ ಪಕ್ಷ ವಹಿಸಿಕೊಂಡಿದೆ. ಎಲ್ಲ ಅಪಾರ್ಟ್ಮೆಂಟ್ ಸಂಘಗಳು, ಕಾರ್ಮಿಕ, ಕೈಗಾರಿಕಾ ಸಂಘಟನೆ, ಎನ್ಜಿಓ, ಚಿತ್ರರಂಗದ ಎಲ್ಲ ವಿಭಾಗದವರು, ಧರ್ಮಗುರುಗಳು, ಜನಸಾಮಾನ್ಯರು ಈ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.
ನಾಳೆ ಬೆಳಗ್ಗೆ 9 ಗಂಟೆಗೆ ತಾಯಿ ಚಾಮುಂಡೇಶ್ವರಿಗೆ ಪೂಜೆ ನಂತರ ಪಾದಯಾತ್ರೆ ಆರಂಭವಾಗಲಿದೆ. ಮಾರ್ಚ್ 3 ರಂದು ಮಧ್ಯಾಹ್ನ ಪಾದಯಾತ್ರೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನ ತಲುಪಲಿದ್ದು, ಅಂದು ಇಲ್ಲಿ ಸಭೆ ನಡೆಸಲಾಗುವುದು. ಸಭೆಯ ಆಯೋಜನೆ ವಿಚಾರವಾಗಿ ನಾನು ಹಾಗೂ ಪಕ್ಷದ ನಾಯಕರಾದ ಬಿ.ಕೆ ಹರಿಪ್ರಸಾದ್, ರಾಮಲಿಂಗಾರೆಡ್ಡಿ, ಡಿ.ಕೆ. ಸುರೇಶ್ ಅವರ ಜತೆ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ನಾವು ಐದು ದಿನಗಳ ಕಾಲ ಬೆಂಗಳೂರು ನಗರದಲ್ಲಿ ಪಾದಯಾತ್ರೆ ಮಾಡಬೇಕಾಗಿತ್ತು, ಬಜೆಟ್ ಅಧಿವೇಶನ ಇರುವ ಕಾರಣ ಕೇವಲ 3 ದಿನ ಪಾದಯಾತ್ರೆ ಮಾಡುತ್ತೇವೆ. ಪಾದಯಾತ್ರೆಗೆ ಬರುವವರು ಮೆಟ್ರೋರೈಲು ಬಳಸಿಕೊಳ್ಳಲು ಅನುಕೂಲವಾಗುವಂತೆ ಈ ಸ್ಥಳ ಆಯ್ಕೆ ಮಾಡಿದ್ದೇವೆ. ಪಾದಯಾತ್ರೆಗೆ ಬರುವವರು ಸಾಧ್ಯವಾದಷ್ಟು ಮೆಟ್ರೋ ಬಳಸಿ ಎಂದು ಮನವಿ ಮಾಡುತ್ತೇನೆ. ನಿಮ್ಮ ಹಕ್ಕಿಗಾಗಿ ನಡೆಯುತ್ತಿರುವ ಐತಿಹಾಸಿಕ ಹೋರಾಟಕ್ಕೆ ನಿಮ್ಮ ಬೆಂಬಲ ಅಗತ್ಯ. ನೀವು ಇದರಲ್ಲಿ ಭಾಗವಹಿಸುವ ಮೂಲಕ ಇತಿಹಾಸದ ಪುಟ ಸೇರುತ್ತೀರಿ. ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದಂತೆ ಈಗ ನಿಮ್ಮ ಕುಡಿಯುವ ನೀರಿನ ಹಕ್ಕಿಗಾಗಿ ಹೋರಾಟ ಮಾಡಿ. ಪಾದಯಾತ್ರೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು ನೋಂದಣಿ ಮಾಡಿಸಿಕೊಳ್ಳಿ. ಆಗ ನಿಮಗೆ ಪ್ರಮಾಣ ಪತ್ರ ನೀಡಲಾಗುವುದು. ರೈತ ಸಂಘಟನೆ, ಕನ್ನಡಪರ ಸಂಘಟನೆಗಳು ಎಲ್ಲರೂ ಸಹಕಾರ ನೀಡಲಿದ್ದಾರೆ. ಧರ್ಮಸ್ಥಳದಲ್ಲಿ ದಲಿತ ಸಮುದಾಯದ ಕಾರ್ಮಿಕನನ್ನು ಭಜರಂಗ ದಳದ ಕಾರ್ಯಕರ್ತರು ಹತ್ಯೆ ಮಾಡಿದ್ದು, ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಯಾವ ನಿಲುವು ತಾಳಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಹತ್ಯೆಯನ್ನು ಭಜರಂಗ ದಳದವರಾದರೂ ಮಾಡಲಿ ಕಾಂಗ್ರೆಸ್ ನವರಾದರೂ ಮಾಡಲಿ ಗೃಹ ಸಚಿವರು, ಪೊಲೀಸರು ಕೂಡಲೇ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಿವಮೊಗ್ಗ ಪ್ರಕರಣ ಹಾಗೂ ಈ ಪ್ರಕರಣದಲ್ಲಿ ಹತ್ಯೆಗೊಂಡವರಿಗೆ ನ್ಯಾಯ ಒದಗಿಸಿಕೊಡಬೇಕು. ಇದು ಪೊಲೀಸರ ಕರ್ತವ್ಯ. ಅವರು ಅದನ್ನು ಮಾಡಲಿ’ ಎಂದು ಆಗ್ರಹಿಸಿದರು. ಉಕ್ರೇನ್ ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳ ರಕ್ಷಣೆಗೆ ಸರ್ಕಾರಕ್ಕೆ ಯಾವ ಸಲಹೆ ನೀಡುತ್ತೀರಿ ಎಂಬ ಪ್ರಶ್ನೆಗೆ, ‘ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಅಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್ ಕರೆತರಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ : ‘ನಮ್ಮ ನೀರು ನಮ್ಮ ಹಕ್ಕು ಎಂದು ಆರಂಭವಾಗಿರುವ ಮೇಕೆದಾಟು ಪಾದಯಾತ್ರೆಯ ಮೊದಲ ಹಂತವನ್ನು ನಾವು ರಾಮನಗರದವರೆಗೂ ಮಾಡಿದ್ದೆವು. ನಾಳೆಯಿಂದ ಎರಡನೇ ಹಂತ ಆರಂಭವಾಗಲಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಬಂದು ಉದ್ಘಾಟನೆ ಮಾಡಲಿದ್ದಾರೆ. ಬೆಂಗಳೂರು, ದಕ್ಷಿಣ ಏಷ್ಯಾದಲ್ಲಿ ಅತಿವೆಗವಾಗಿ ಬೆಳೆಯುತ್ತಿರುವ ನಗರ. ಈ ನಗರಕ್ಕೆ 2050ರ ವೇಳೆಗೆ ಕುಡಿಯುವ ನೀರು ಅಭಾವ ತಲೆದೋರಲಿದೆ. ಕಾವೇರಿ ಏಳನೇ ಹಂತ ಬಂದರೂ 7 ಸಾವಿರ ಅಪಾರ್ಟ್ಮೆಂಟ್ ಗಳಿಗೆ ನೀರು ಸಿಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಸದಾ ಜನಪರ ಕಾರ್ಯಕ್ರಮ ಹಮ್ಮಿಕೊಂಡು ಜನರ ಪರವಾಗಿ ಹೋರಾಡುತ್ತಿದೆ. ಜನಸಾಮಾನ್ಯರು ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಈ ಮೂಲಕ ಕೋರುತ್ತೇನೆ.’ ಉಕ್ರೇನ್ ಹಾಗೂ ರಷ್ಯಾ ವಿರುದ್ಧದ ಸಮರ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನರೇಂದ್ರ ಮೋದಿ ಅವರ ಸರ್ಕಾರ ವಿದೇಶಾಂಗ ನೀತಿಯಲ್ಲಿ ಸಂಪೂರ್ಣ ವಿಫಲವಾಗಿದೆ. ಹಿಂದೆ ಅಲಿಪ್ತ ರಾಷ್ಟ್ರಗಳ ಕೂಟದ ನೇತೃತ್ವ ವಹಿಸಿದ್ದ ನೆಹರೂ ಅವರ ವಿದೇಶಾಂಗ ನೀತಿಯನ್ನು ಇಂದು ಎಲ್ಲರು ನೆನಪಿಸಿಕೊಳ್ಳುತ್ತಿದ್ದಾರೆ. ದಿನಬೆಳಗಾದರೆ ಪಂಡಿತ್ ನೆಹರೂ ಅವರ ಬಗ್ಗೆ ಮಾತನಾಡುವ ಸಂಘ ಪರಿವಾರದವರು, ಬಿಜೆಪಿ, ಮೋದಿ ಅವರಿಗೆ ಅಲಿಪ್ತ ರಾಷ್ಟ್ರಗಳ ನೀತಿ ಏನು ಎಂದು ಎಲ್ಲರಿಗೂ ಅರ್ಥವಾಗುತ್ತಿದೆ. ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧದ ಕಾರ್ಮೋಡ ಕಳೆದ ಒಂದು ತಿಂಗಳಿಂದ ಆವರಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ನಮ್ಮವರನ್ನು ಅಲ್ಲಿಂದ ಕರೆತರಬೇಕಾಗಿತ್ತು. ಯಾವುದೇ ಕ್ರಮ ಕೈಗೊಳ್ಳದ ಕಾರಣ, ಸಂಕಷ್ಟ ಪಡುವಂತಾಗಿದೆ. ಮುನ್ನೆಚ್ಚರಿಕೆ ಇಲ್ಲದೆ ಲಾಕ್ ಡೌನ್ ಮಾಡಿದಂತೆ ಈಗ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಿದಂತೆ ಈಗ ಪದಾಡುತ್ತಿದ್ದಾರೆ. ಕೇಂದ್ರದ ವಿದೇಶಾಂಗ ನೀತಿ ಸಂಪೂರ್ಣ ವಿಫಲವಾಗಿದೆ ಎಂಬುದು ಈ ಮೂಲಕ ತಿಳಿಯುತ್ತದೆ’ ಎಂದು ಉತ್ತರಿಸಿದರು.
ಸಂಸದ ಡಿ.ಕೆ. ಸುರೇಶ್ ಮಾತನಾಡಿ: ಇಡೀ ಪ್ರಪಂಚ ಉಕ್ರೇನ್ ಕಡೆ ತಿರುಗಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಧಾನಮಂತ್ರಿಗಳು ಯಾವುದೇ ಸ್ಪಷ್ಟ ನಿಲುವು ತೆಗೆದುಕೊಳ್ಳದಿರುವುದು ಬಹಳ ಶೋಚನೀಯ ಸ್ಥಿತಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಅಲ್ಲಿನ ನಾಗರೀಕರು, ಭಾರತೀಯರ ರಕ್ಷಣೆ ಮಾಡಲು ಮುಂಜಾಗೃತಾ ಕ್ರಮ ಕೈಗೊಳ್ಳಬೇಕಿತ್ತು. ಭಾರತೀಯ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹೋಗಿದ್ದು, ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಷ್ಟು ದಿನ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ ಈಗ ತುರ್ತು ಸೇವೆ ಬಳಸುವ ಮಾತಾಡುತ್ತಿದೆ. ಅವರ ಹಾಹಾಕಾರ ಹಾಗೂ ಅವರ ಸಂಕಷ್ಟದ ಮಾತುಗಳನ್ನು ನೋಡಿದರೆ ನಮ್ಮ ಮೈ ನಡುಗುತ್ತದೆ. ಕನ್ನಡಿಗರು ಸೇರಿದಂತೆ ಭಾರತೀಯರನ್ನು ವಾಪಸ್ ಕರೆತರಲು ಪ್ರಧಾನಮಂತ್ರಿಗಳು ಕೂಡಲೇ ಅಗತ್ಯ ಕ್ರಮಕೈಗೊಳ್ಳಬೇಕು. ಸುಮಾರು 350 ರಿಂದ 400 ಮಂದಿ ಕನ್ನಡಿಗರು ಸಿಕ್ಕಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಅವರನ್ನು ವಾಪಸ್ ಕರೆಸಿಕೊಳ್ಳಲು ಕ್ರಮಕೈಗೊಳ್ಳಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಕಾಪಾಡಲು, ಸಲಹೆ ಹಾಗೂ ಒತ್ತಡ ಹೇರಬೇಕು. ದೇಶದ ವಿದೇಶಾಂಗ ನೀತಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಇಂದು ವಿದೇಶಾಂಗ ನೀತಿ ಸಂಪೂರ್ಣವಾಗಿ ಹದಗೆಟ್ಟಿದೆ. ಆದರೆ ಈ ವಿಚಾರ ಮಾತನಾಡುವ ಸಮಯ ಇದಲ್ಲ. ಉಕ್ರೇನ್ ನಲ್ಲಿ ಇರುವ ಜೀವಗಳ ರಕ್ಷಣೆ ಬಗ್ಗೆ ಯೋಚಿಸಬೇಕು. ವಿಶ್ವಸಂಸ್ಥೆಯಲ್ಲಿ ನಾವು ಸ್ಪಷ್ಟ ನಿಲುವು ಹೇಳಬೇಕಾಗಿತ್ತು. ಹಿಂದೆ ಸರಿಯುವುದು ತಪ್ಪು. ಶಾಂತಿಗಾಗಿ ಇರುವವರು ನಾವು, ಶಾಂತಿಯಿಂದ ದೇಶ ಗೆದ್ದಿರುವವರು ನಾವು, ಶಾಂತಿಯ ಮಂತ್ರದ ಜೊತೆ ಸ್ಪಷ್ಟ ಸಂದೇಶ ನೀಡಬೇಕಾಗಿತ್ತು. ಅದನ್ನು ಮಾಡದಿರುವುದು ಇವರ ನಿಲುವು ಏನೆಂಬುದು ತೋರುತ್ತದೆ ‘ ಎಂದರು.