ಯಾರಿಗೆ ಬಂತು ಸ್ವಾತಂತ್ರ್ಯ?

Prasthutha|

ಸ್ವಾತಂತ್ರ್ಯಕ್ಕೆ ಸಂತಾನ ಹರಣ ಯೋಗ

- Advertisement -

ಪ್ರಜಾತಂತ್ರ ಎಂಬುದು ಸಂಪೂರ್ಣ ಅತಂತ್ರವಾಗಿರುವ ಆತಂಕದ ಕಾಲಘಟ್ಟದಲ್ಲಿ ನಾವಿದ್ದೇವೆ. ಪ್ರಜಾತಂತ್ರವನ್ನು ಬಳಸಿಕೊಂಡು ಪ್ರಜಾಪ್ರಭುತ್ವವನ್ನೇ ಹಣಿಯುವ ಎಷ್ಟೊಂದು ವಿಕಾರ ಮಾರ್ಗಗಳಿವೆ ಎಂಬುದು ದೃಗ್ಗೋಚರವಾಗುತ್ತಿದೆ. ಪೂಜಾ ಮಂದಿರಗಳನ್ನಷ್ಟೇ ಅಲ್ಲದೆ ಜಂಗಮವಾಗಿರುವ ಹುಲು ಮಾನವರನ್ನೂ ಅಪಹಾಸ್ಯಕ್ಕೆ ಈಡುಮಾಡಲಾಗುತ್ತಿದೆ.

80ರ ವಯಸನ್ನು ದಾಟಿದ, ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಮಾನವತಾವಾದಿ ಹೋರಾಟಗಾರ ಮತ್ತು ಪಾದ್ರಿ ಸ್ಟ್ಯಾನ್ ಸ್ವಾಮಿ ಅವರಿಗೆ ನೀರು ಕುಡಿಯಲು ಹೀರುಗೊಳವೆಯನ್ನು ನಿರಾಕರಿಸುವ, ಲೂಟಿಕೋರರನ್ನು ಜೋಪಾನವಾಗಿ ಪರದೇಶಗಳಲ್ಲಿ ಸಾಕುವ, ಬಹುಮತವಿದೆ ಎಂಬವೊಂದೇ ಕಾರಣಕ್ಕೆ ಯಾವುದೇ ಸಾರ್ವಜನಿಕ ಚರ್ಚೆಯನ್ನೂ ನಡೆಸದೇ ಬೇಕಾಬಿಟ್ಟಿಯಾಗಿ ಕಾನೂನುಗಳನ್ನು ಪುಂಖಾನು ಪುಂಖವಾಗಿ ಜಾರಿಗೆ ತರಲಾಗುತ್ತಿದೆ. ಆಗೀಗ ಸರ್ವೋಚ್ಚ ನ್ಯಾಯಾಲಯವೂ ಸೇರಿದಂತೆ ಹಲವು ನ್ಯಾಯಾಲಯಗಳು ಛೀಮಾರಿ ಹಾಕಿದಾಗಲೂ ನಗುಮೊಗದಿಂದ ಸಮಾಜದ ಎದುರು ಹಗಲು ವೇಷ ಕಟ್ಟಿ ಕುಣಿಯುವ ಹೊಸ ಪ್ರಹಸನಗಳನ್ನೂ ಕಾಣುತ್ತಿದ್ದೇವೆ. ಕೆಲಸ ಕಳೆದುಕೊಂಡು ಊರು ನೀರು ಸೂರು ಇಲ್ಲದೆ ಮಾರ್ಗ ಮಧ್ಯದಲ್ಲಿ ಅತಂತ್ರವಾಗಿ ದಿಕ್ಕಾಪಾಲಾಗಿ ಓಡಾಡುವ ಬಡಪಾಯಿಗಳನ್ನು ಕಾಣದ ಕುರುಡು ಸರ್ವೇ ಸಾಮಾನ್ಯವಾಗಿದೆ. ರಸ್ತೆಗೆ ಮೊಳೆಗಳನ್ನು ಜಡಿದು ಆರಕ್ಷಕರ ಸರ್ಪಗಾವಲಿನಲ್ಲಿ ರೈತರ ನ್ಯಾಯಯುತ ಧ್ವನಿಗಳನ್ನು ದಮನ ಮಾಡಲಾಗುತ್ತಿದೆ.

- Advertisement -

ಸಾಯುತ್ತಿದ್ದೇನೆ, ಆಕ್ಸಿಜನ್ ಕೊಡಿಸಿ ಎಂದರೆ ಅದೇ ದೇಶದ್ರೋಹವಾಗುತ್ತದೆ. ಜನಗಳಿಗಿಂತ ದನಗಳೇ ಹೆಚ್ಚು ಸುರಕ್ಷಿತವಾಗಿರುವಂತೆ ಕಾಣುತ್ತಿದೆ. ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ಆದಿವಾಸಿ ಜನರು, ದಿನಗೂಲಿ ನೌಕರರು ಸರ್ವಶಕ್ತನಾದ ದೇವರಿಗೆ ಮೊರೆಯಿಡುವುದೊಂದೇ ಉಳಿದಿರುವ ದಾರಿಯಾಗಿದೆ. ವಿದ್ಯಾರ್ಥಿಗಳನ್ನು, ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುವವರನ್ನು ಹುಡುಕಿ ಹುಡುಕಿ ಜೈಲಿಗೆ ದಬ್ಬಲಾಗುತ್ತಿದೆ.
ಈ ದೇಶ ಸ್ವಾತಂತ್ರ್ಯದ ಕನಸು ಕಾಣುತ್ತಿದ್ದ ಕಾಲದಲ್ಲಿ ಮೊಳಕೆ ಒಡೆದು ಚಿಗುರಿ ನಿಂತ ಕನಸುಗಳು ಈಗ ಹಳವಂಡಗಳಂತೆ ಭಾಸವಾಗುತ್ತಿದೆ. ದೇಶ, ದೇಶಪ್ರೇಮ ಎಂಬ ಬುರುಡೆ ಮಾತುಗಳು ರಾರಾಜಿಸುತ್ತಿವೆ. ನೊಬೆಲ್ ಪ್ರಶಸ್ತಿ ವಿಜೇತ ಗುರುದೇವ ರವೀಂದ್ರನಾಥ ಠಾಗೋರರು, ರಾಷ್ಟ್ರಧ್ವಜ ಮುಂತಾದ ರಾಷ್ಟ್ರ ಲಾಂಛನಗಳು ಹಾಗೂ ಜೀವ ಸಂಕುಲದ ಜೀವ ನಮ್ಮ ಆಯ್ಕೆಯಾಗಿದ್ದ ಪಕ್ಷದಲ್ಲಿ, ಜೀವವೇ ದೊಡ್ಡದು, ಲಾಂಛನಗಳಲ್ಲ ಎಂದ ಮಾತು ಇವತ್ತು ಅರಣ್ಯರೋದನದಂತೆ ಕೇಳಲಾರಂಭಿಸಿದೆ. ಪ್ರಜಾತಂತ್ರ ಎಂಬುದು ಸರ್ವಾಧಿಕಾರದ ಹೊಸ ಬಣ್ಣದವೇಷವಾಗಿದೆ. ಅದರ ಕಾಕು ಮತ್ತು ಕೇಕೆ ಮೈನಡುಗಿಸಿ ಬೆಚ್ಚಿಬೀಳಿಸುವಂತಿದೆ.

ಈ ದೇಶಕ್ಕೆ ಸ್ವಾತಂತ್ರ್ಯ ಬರುವ ಕಾಲದಲ್ಲಿ ಅಟ್ಟಹಾಸಗೈದ ಹಿಂಸಾಚಾರ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಬರ್ಬರ ಹತ್ಯೆಯನ್ನು ನೆನಪಿಸುವ ಹಿಂಸಾವಾದ ಈಗ ಕೇವಲ ಮರುಕಳಿಸುತ್ತಿರುವುದಲ್ಲ, ಬದಲಾಗಿ ಉಲ್ಬಣಗೊಳ್ಳುತ್ತಿದೆ. ಈ 75 ವರ್ಷಗಳಲ್ಲಿ ಸ್ವಾತಂತ್ರ್ಯಕ್ಕೂ ಕೂಡ ಮುಪ್ಪು, ಮಂಕು, ದೌರ್ಬಲ್ಯಗಳು ಅಡರಿರಲಿಲ್ಲ ಎಂದು ಹೇಳಲಾಗದು ಎನ್ನುವುದು ನಿಜವೇ ಆಗಿದ್ದರೂ ಸ್ವಾತಂತ್ರ್ಯಕ್ಕೆ ಎಪ್ಪತ್ತೈದೇ ವರ್ಷಗಳಲ್ಲಿ ಮುಪ್ಪಡರಿ ಸಾವನ್ನಪ್ಪುವ ಪರಿಸ್ಥಿತಿ ಬಂದೀತು ಎಂದು ಕನಸು ಮನಸಿನಲ್ಲಿಯೂ ಹಲವರು ಯೋಚಿಸಿರಲಿಲ್ಲ.

ಈ ಬರ್ಬರ ವಿಕಟ ಅಟ್ಟಹಾಸವನ್ನು ಕ್ಷಣಿಕವಾದುದು ಎಂದು ಭಾವಿಸಲಾಗದು. ಕಣ್ಣಿಗೆ ಕಣ್ಣು ಎಂಬ ಕುರುಡು, ಮನುಷ್ಯ ಕುಲವನ್ನೇ ಕುರುಡರಾಗಿಸುವುದು ಎಂಬ ಸರಳ, ಆದರೆ ವಿರಳ ಸತ್ಯ ಇಷ್ಟು ಬೇಗ ಮರೆವೆಗೆ ಸಲ್ಲಬಹುದೆಂದು ಸಜ್ಜನರು ಭಾವಿಸಿರಲಿಲ್ಲ. ಈ ವಿಕಟ ಅಟ್ಟಹಾಸವನ್ನು ನಮ್ಮದೇ ಕಣ್ಣೆದುರು ಹಾದಿಬಿದಿಗಳಲ್ಲಿ ನೋಡಬೇಕಾದ ದಾರುಣತೆಗೆ ಪ್ರತ್ಯಕ್ಷ ಸಾಕ್ಷಿಗಳಾಗಬೇಕಾದ ನಮ್ಮ ಈ ದುರಂತಮಯ ಕಾಲ ಸುಧಾರಿಸಲಿ ಎಂಬ ಅಂತರಂಗದ ಕಿರು ಬೆಳಕಷ್ಟೇ ಸದ್ಯಕ್ಕೆ ನಮ್ಮೆದುರಿರುವ ದಾರಿದೀಪವಾಗಿದೆ. ನಮ್ಮನ್ನು ಹಿಂಡಿ ಹಿಪ್ಪೆಮಾಡಿದ, ಹಲವು ಬಗೆಯ ಕುತಂತ್ರಗಳನ್ನು ಹಾಗೂ ಬಿರುಕುಗಳನ್ನು ನಮ್ಮ ನಡುವೆ ನೆಟ್ಟ ಬ್ರಿಟಿಷರ ವಸಹಾತುಶಾಹಿಯ ಕಾಲಿಗೆ ಬಿದ್ದು ಅವರ ಜೊತೆ ಕೈ ಜೋಡಿಸಿದ ನಾಮರ್ದರೇ ಬೊಗಳುತ್ತಿರುವ ದೇಶ ಭಕ್ತಿಯ ಪೊಳ್ಳು ಪಾಠವನ್ನೂ ನಾವು ಕೇಳುತ್ತಿದ್ದೇವೆ. 1909ರಲ್ಲಿ ಮಹಾತ್ಮ ಗಾಂಧಿಯವರು ಬರೆದ ಅಪೂರ್ವ ಕೃತಿ ‘ಹಿಂದ್ ಸ್ವರಾಜ್’ದಲ್ಲಿ ಬರುವ ಸಂಭಾಷಣೆಯೊಂದರಲ್ಲಿ ಒಂದು ಪ್ರಶ್ನೆ ಬರುತ್ತದೆ. ಈ ದೇಶಕ್ಕೆ ಯಾಕೆ ಸ್ವಾತಂತ್ರ್ಯ ಬೇಕು ಮತ್ತು ಅದು ಯಾವ ಸ್ವರೂಪದಲ್ಲಿ ಇರಬೇಕು ಎಂಬ ಆಳವಾದ ಚಿಂತನೆ ಇಲ್ಲದೆ ಸ್ವಾತಂತ್ರ್ಯವನ್ನು ಕಲ್ಪಿಸಿಕೊಳ್ಳಲಾಗದು. ಈ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಅದೇ ಬ್ರಿಟಿಷರ ಸಂಸತ್ತು, ಅವವೇ ಕಾನೂನುಗಳು, ಬಲಾಢ್ಯ ಸೈನ್ಯ, ಹೂಂಕರಿಸುವ ದರ್ಪಗಳೇ ನಮ್ಮ ಬಳುವಳಿಗಳಾದರೆ ಆ ಕೆಲಸವನ್ನು ಬ್ರಿಟಿಷರೇ ಹೆಚ್ಚು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲರು. ಇದರಲ್ಲಿ ಅವರಿಗೆ ವಿಶೇಷವಾದ ಪರಿಣತಿ ಇದೆ. ಇದು ಮನುಷ್ಯ ದ್ವೇಷಿಯಾಗಿದೆ. ನನ್ನ ಕಲ್ಪನೆಯ ಸ್ವತಂತ್ರ ಭಾರತ ಇದಲ್ಲ ಎಂದು ಮಹಾತ್ಮ ಗಾಂಧಿ ಈ ಪುಸ್ತಕದಲ್ಲಿ ಪ್ರತಿಪಾದಿಸುತ್ತಾರೆ.
ರಾಮನ ಹೆಸರಲ್ಲೇ ಜೀವಮಾನ ಕಳೆದ, ಈಶ್ವರ ಅಲ್ಲಾಹ್ ತೇರೋ ನಾಮ್ ಎಂಬ ಮಂತ್ರವನ್ನು ಪ್ರತಿಪಾದಿಸಿದ ಮಹಾತ್ಮ ಗಾಂಧಿಯವರನ್ನೇ ಗುಂಡಿಟ್ಟು ಕೊಂದ ಜನರಿಗೆ ನಾವು ನೀವು ಯಾವ ಲೆಕ್ಕ?

ಆದರೂ ಬೆಂಕಿ ದೀಪವಾಗಿ ಬೆಳಗಬಹುದು, ಪ್ರೀತಿಯ ಹಂಬಲ ಮಾತ್ರವೇ ಜೀವಗಳನ್ನು ಪೊರೆಯುವುದು. ಕನಸುಗಳನ್ನು ಮನುಷ್ಯರನ್ನು ಕೊಂದಷ್ಟು ಸುಲಭವಾಗಿ ಕೊಲ್ಲಲಾಗದು. ಮಹಾತ್ಮಾ ಗಾಂಧಿಯವರು ಹೇಳಿರುವಂತೆ, ಈ ಜಗತ್ತು ಮರುಭೂಮಿಯಾಗದೇ ಇವತ್ತಿಗೂ ಉಳಿದಿದೆ. ಎಂಬುದೇ ಸತ್ಯವಾದುದು. ತಾಯ ಮಮತೆ ಮಾತ್ರವೇ ಜೀವ ಸಂಕುಲವನ್ನು ಇವತ್ತಿಗೂ ಕಾಪಾಡುತ್ತಿರುವುದು. ಈಜುಪಟುವಿಗೆ ನೀರಿನಲ್ಲೇ ಸಾವು ಎಂಬ ಮಹತ್ಮಾ ಗಾಂಧಿಯ ಮಾತು ಹಾಗೂ ಖಡ್ಗ ಹಿಡಿದವನಿಗೆ ಖಡ್ಗದಿಂದಲೇ ಮರಣ ಎಂಬ ಯೇಸು ಕ್ರಿಸ್ತನ ಮಾತು ಇದನ್ನೇ ಹೇಳುತ್ತದೆ. ಎಲ್ಲ ಕತ್ತಲ ಸುರಂಗಗಳ ಕೊನೆಯಲ್ಲಿ ಬೆಳಕಿನ ಕಿಂಡಿಯೊಂದು ಭರವಸೆಯಾಗಿ ಇರುತ್ತದೆ. ಎಂಬ ಆಶೆಯೊಂದೇ ನಾವು ಇಂದು ಹಾರೈಸಬಹುದಾದ ಹರಕೆಯಾಗಿದೆ.



Join Whatsapp