ವಾಕ್ ಸ್ವಾತಂತ್ರ್ಯಕ್ಕೆ ಅಂಕುಶ.. ದ್ವೇಷ ಭಾಷಣಗಳಿಗೆ ಅವಕಾಶ!

Prasthutha|

✍️ ಎಫ್. ನುಸೈಬಾ ಕಲ್ಲಡ್ಕ

- Advertisement -

ಬ್ರಿಟಿಷರ ದಾಸ್ಯತನದಿಂದ ಮುಕ್ತವಾಗಿ ಸ್ವತಂತ್ರಗೊಂಡ ಭಾರತ ಇದೀಗ 77 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಆದರೆ ಪ್ರಸಕ್ತ ಕಾಲಘಟ್ಟದಲ್ಲಿ ಸ್ವಾತಂತ್ರ್ಯದ ನೈಜ ಪರಿಕಲ್ಪನೆಯು ಸರ್ವಾಧಿಕಾರದ ತೆಕ್ಕೆಯಲ್ಲಿ ಕೊಚ್ಚಿ ಹೋದಂತೆ ಭಾಸವಾಗುತ್ತಿದೆ. ಎಲ್ಲ ವರ್ಗದ ಜನರಿಗೆ ಸಮಾನತೆಯ ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಫ್ಯಾಶಿಸ್ಟ್ ಮನಸ್ಥಿತಿಯು ದೇಶವನ್ನು ಆಳುತ್ತಿರುವಾಗ ಜಾತಿ ಧರ್ಮಗಳ ಆಧಾರದಲ್ಲಿ ಪ್ರಜೆಗಳ ಸ್ವಾತಂತ್ರ್ಯವು ನಿರ್ಧರಿತವಾಗುತ್ತಿದೆ.

ಇತರೆ ಎಲ್ಲಾ ಸ್ವಾತಂತ್ರ್ಯಗಳ ತಾಯಿ ಎಂದೇ ಪರಿಗಣಿಸಲ್ಪಡುವ  ವಾಕ್ ಸ್ವಾತಂತ್ರ್ಯ ಇಲ್ಲಿ ಗರಿಷ್ಠ ಮಟ್ಟದಲ್ಲಿ ದಮನಿಸಲ್ಪಡುತ್ತಿದೆ. ಸಂವಿಧಾನದ ವಿಧಿ 19 ವಾಕ್ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತದೆ. ವಾಕ್ ಸ್ವಾತಂತ್ರ್ಯವು ಕೆಲವು ಅಗತ್ಯ ಮತ್ತು ಸ್ವೀಕಾರಾರ್ಹ ನಿರ್ಬಂಧಗಳೊಂದಿಗೆ  ತಮ್ಮ ಅಭಿಪ್ರಾಯಗಳನ್ನು, ಆಲೋಚನೆಗಳನ್ನು ವ್ಯಕ್ತಪಡಿಸಲು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇರುವ ಹಕ್ಕಾಗಿದೆ.  ಸರ್ಕಾರ ಮತ್ತು ಅದರ ನೀತಿಗಳನ್ನು ಟೀಕಿಸಲು, ಎದುರಿಸಲು ಈ ಹಕ್ಕು ಅನುಮತಿ ನೀಡುತ್ತದೆ. ಅಲ್ಲದೆ ದೇಶದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುತ್ತದೆ. ಆದರೆ ಪ್ರಸ್ತುತ ದಿನಗಳಲ್ಲಿ ಈ ತಾಯಿಯನ್ನೇ ತುಳಿದು ತನ್ನ ಸಾಮ್ರಾಜ್ಯವನ್ನು ಮತ್ತಷ್ಟು ಭದ್ರಗೊಳಿಸುವ ಭರದಲ್ಲಿದೆ  ಆಡಳಿತ ಸರ್ಕಾರ.

- Advertisement -

ಭಾರತದಲ್ಲಿ ವಾಕ್ ಸ್ವಾತಂತ್ರ್ಯದ ಮೇಲಾಗುತ್ತಿರುವ ದಬ್ಬಾಳಿಕೆಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.  ಸರ್ಕಾರದ ಆಡಳಿತ ನೀತಿಯನ್ನು ಪ್ರಶ್ನಿಸುವ,  ಸತ್ಯವನ್ನು ಜನತೆಯ ಮುಂದಿಡಲು ಪ್ರಯತ್ನಿಸುವ, ನ್ಯಾಯಕ್ಕಾಗಿ ಧ್ವನಿಯೆತ್ತುವ, ಅನ್ಯಾಯದ ವಿರುದ್ಧ ಪ್ರತಿಭಟಿಸುವ ಸಾಮಾಜಿಕ ಹೋರಾಟಗಾರರಿಗೆ , ಪತ್ರಕರ್ತರಿಗೆ,   ಟ್ವಿಟರ್ ಫೇಸ್’ಬುಕ್ ಮುಂತಾದ ಸಾಮಾಜಿಕ  ಜಾಲತಾಣಗಳಿಂದ ನಿರ್ಬಂಧ ಹೇರಿ  ಸಮಾಜದ ಮುಖ್ಯವಾಹಿನಿಗೆ ಬಾರದಂತೆ ತಡೆಯೊಡ್ಡುವುದು, ದೇಶದ್ರೋಹದ ಕೇಸು ಜಡಿದು ಜೈಲು ಕಂಬಿಗಳ ಹಿಂದೆ ಬಂಧಿಯಾಗಿಸುವುದು,  ಎಲ್ಲವೂ ಅವ್ಯಾಹತವಾಗಿ ನಡೆಯುತ್ತಿದೆ. ಇದು ಸಂವಿಧಾನದ ವಿಧಿ 19 ರ ನೇರ ಉಲ್ಲಂಘನೆಯಾಗಿದೆ. ಗುಜರಾತ್ ಗಲಭೆ ಸಂತ್ರಸ್ತರ  ಧ್ವನಿಯಾಗಿದ್ದ ತೀಸ್ತಾ ಸೆಟೆಲ್ವಾಡ್,  ಸಂಜೀವ್ ಭಟ್,  ಉಮರ್ ಖಾಲಿದ್, ಪತ್ರಕರ್ತ ಸಿದ್ದೀಕ್ ಕಾಪ್ಪನ್,  ಸುಳ್ಳು ಸುದ್ದಿಗಳನ್ನು ತಡೆಗಟ್ಟಲು ಫ್ಯಾಕ್ಟ್ ಚೆಕ್  ಮಾಧ್ಯಮ ಸಂಸ್ಥೆಯನ್ನು ಸ್ಥಾಪಿಸಿ ಜನರಿಗೆ ಸತ್ಯ ತಲುಪಿಸಲು ಪ್ರಯತ್ನಿಸುವ ಆಲ್ಟ್ ನ್ಯೂಸ್ ನ ಝುಬೈರ್,  ಸ್ಟಾನ್ ಸ್ವಾಮಿ ಮುಂತಾದ  ಧ್ವನಿ ದಮನಿಸಲ್ಪಟ್ಟ ಹಲವು ಸಾಮಾಜಿಕ ಹೋರಾಟಗಾರರನ್ನು ಕಾಣಬಹುದಾಗಿದೆ.

ಕೋಮು ದ್ರುವೀಕರಣದ ಜ್ವಾಲೆಗೆ ಹಲವು ರಾಜ್ಯಗಳು ಹೊತ್ತಿ ಉರಿಯುವಾಗ ತನ್ನ ಆಡಳಿತ ವೈಫಲ್ಯತೆಯನ್ನು ಹೊರ ಜಗತ್ತಿನಿಂದ ಮರೆಮಾಚಲು ಅಲ್ಲಿನ ಇಂಟರ್ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸುವುದು ಕೂಡ ವಾಕ್ ಸ್ವಾತಂತ್ರ್ಯದ ಹರಣವೇ ಆಗಿದೆ. ಇದಲ್ಲದೆ ಅಧಿಕಾರ ದುರುಪಯೋಗದಿಂದ ನ್ಯಾಯಾಲಯದ ದಾರಿ ತಪ್ಪಿಸಲು ಯತ್ನಿಸಲಾಗಿರುವ ಘಟನೆಗೆ ದೇಶವೇ ಸಾಕ್ಷಿಯಾಗಿದೆ. ಇತ್ತೀಚೆಗೆ ನ್ಯಾಯಾಲಯದಲ್ಲಿ ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ ವೇಳೆಗೆ ದೆಹಲಿ ಪೊಲೀಸರು ಉಮರ್ ವಿರುದ್ಧ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ವೀಡಿಯೋ ಒಂದನ್ನು ಸಾಕ್ಷಿಯಾಗಿ ಸಲ್ಲಿಸಿದ್ದರು.  ವಾಸ್ತವದಲ್ಲಿ ಅದು  ಟೈಮ್ಸ್ ನೌ ಮಾಧ್ಯಮದಲ್ಲಿ ಉಮರ್ ಖಾಲಿದ್ ಮಾಡಿದ ಭಾಷಣವನ್ನು ತಿರುಚಿ ಪ್ರಸಾರ ಮಾಡಲಾದ ವೀಡಿಯೋ ಆಗಿತ್ತು. ನ್ಯಾಯಾಲಯದಲ್ಲೂ ಈ ರೀತಿ ವಂಚಿಸಲು ಒಂದು ಮಾಧ್ಯಮ ಕಸರತ್ತು ನಡೆಸುತ್ತದೆ ಎಂದಾದರೆ  ಇಲ್ಲಿ  ಸುಳ್ಳನ್ನೇ ಸತ್ಯವಾಗಿಸಲು ಹೊರಟವರಿಗೆ  ಪ್ರಭುತ್ವದ ಬೆಂಬಲವು ಇದೆ ಎಂಬುದು ಸ್ಪಷ್ಟ. ಪ್ರಭುತ್ವದ ಈ ದಮನಕಾರಿ ನೀತಿಯು ಪ್ರಜೆಗಳ  ವಾಕ್ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುವಂತಾದರೆ ಸ್ವಾತಂತ್ರ್ಯೋತ್ಸವ ಪದದ ಪರಿಕಲ್ಪನೆಯಾದರೂ ಏನು ಎಂಬುವುದನ್ನು  ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿಯವರು ವಿವರಿಸಬೇಕಿದೆ.

ಒಂಬತ್ತು ವರ್ಷಗಳ ಆಡಳಿತ ಅವಧಿಯಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ಎದುರಿಸದ ಪ್ರಧಾನಿಯವರಿಗೆ ಶ್ವೇತ ಭವನದಲ್ಲಿ  ಒಂದೇ ಒಂದು ಪ್ರಶ್ನೆ ಕೇಳಿದ್ದಕ್ಕಾಗಿ ಪತ್ರಕರ್ತೆ ಸಬ್ರೀನಾ ಸಿದ್ದೀಕಿ ಟ್ವಿಟ್ಟರ್’ನಲ್ಲಿ ಮೋದಿ ಬಳಗದಿಂದ ಹಲವು  ನಿಂದನೆಗಳನ್ನು ಎದುರಿಸಬೇಕಾಗಿ ಬಂದಿರುವುದು ಇಲ್ಲಿ ಸ್ಮರಣಾರ್ಹ. ರೈತರ ಪ್ರತಿಭಟನೆಯ ಕೆಲವು ಟ್ವೀಟ್ ಗಳನ್ನು ತೆಗೆದು ಹಾಕದಿದ್ದರೆ  ಭಾರತದಲ್ಲಿ ಟ್ವಿಟರ್ ಮೇಲೆ ನಿಷೇಧ ಹೇರುವುದಾಗಿ ನರೇಂದ್ರ ಮೋದಿ ಸರ್ಕಾರ ಟ್ವಿಟರ್ ಗೆ ಬೆದರಿಕೆ ಹಾಕಿತ್ತು ಎಂಬುವುದಾಗಿ ಟ್ವಿಟರ್ ಸಹ ಸಂಸ್ಥಾಪಕ ಜಾಕ್ ಡಾರ್ಸಿ ಹೇಳಿದ್ದಾರೆ. ವಾಕ್ ಸ್ವಾತಂತ್ರ್ಯವನ್ನು ಉಲ್ಲಂಘಿಸಿದ ಸರ್ಕಾರಗಳೊಂದಿಗಿನ ಅನುಭವದ ಕುರಿತು ಕೇಳಿದಾಗ, ಜಾಕ್ ಡಾರ್ಸಿ ಮೊತ್ತ ಮೊದಲು ಉಲ್ಲೇಖಿಸಿದ್ದು ಭಾರತದ ಹೆಸರನ್ನು.   ಈ ರೀತಿ ವಾಕ್ ಸ್ವಾತಂತ್ರ್ಯದ ಹರಣಕ್ಕಾಗಿ ಜಾಗತಿಕ ಮಟ್ಟದಲ್ಲಿ ಭಾರತ ಗುರುತಿಸುವಂತಾಗಿದ್ದು ವಿಪರ್ಯಾಸ. 

ನ್ಯಾಯ ಪರವಾದ ವಾಕ್ ಸ್ವಾತಂತ್ರ್ಯಕ್ಕೆ ಅಂಕುಶ ಹಾಕುವ ಪ್ರಭುತ್ವವು ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ  ಸುಳ್ಳು ಸುದ್ದಿಗಳು ಹಾಗೂ  ದ್ವೇಷ ಭಾಷಣಗಳಿಗೆ ಅವಕಾಶ ನೀಡುತ್ತಿರುವುದು ದುರಂತವೇ ಸರಿ. ದೇಶದ ಸಾರ್ವಭೌಮತೆಗೆ ಮಾರಕವಾಗಿದ್ದರೂ ಅವುಗಳನ್ನು ನಿಯಂತ್ರಿಸುವ ಗೋಜಿಗೆ ಹೋಗದ ಸರ್ಕಾರಗಳು ಅರಾಜಕತೆಯ ಸೃಷ್ಟಿಗೆ ಪರೋಕ್ಷವಾಗಿ ಕಾರಣವಾಗುತ್ತಿವೆ. ಮೋನು ಮನೇಸರ್ ಎಂಬ ಕೋಮುಕ್ರಿಮಿಯ  ದ್ವೇಷ ಪೂರಿತ ಆಡಿಯೋ ಒಂದು ಹರಿಯಾಣದ ನೂಹ್ ಹಾಗೂ ಗುರುಗ್ರಾಮಗಳನ್ನು ಹೊತ್ತಿ ಉರಿಯುವಂತೆ ಮಾಡಿದರೆ, ಸುಳ್ಳು ಸುದ್ದಿಗಳು ಮಣಿಪುರದಲ್ಲಿ ಅಪಾರ ಸಾವು ನೋವುಗಳಿಗೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಈ ಸುಳ್ಳು ಸುದ್ದಿಗಳು ಹಾಗೂ ದ್ವೇಷ ಭಾಷಣಗಳು ಅದೆಷ್ಟರ ಮಟ್ಟಿಗೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದರೆ ಮನುಷ್ಯ ಚಿಂತನಾ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ದ್ವೇಷ  ಅಸಹನೆ, ಶತ್ರುತ್ವ ಆತನ ಅಂತರಾಳದಲ್ಲಿ  ಹುದುಗಿಹೋಗುತ್ತಿದೆ.  ಪತ್ರಿಕಾ ಧರ್ಮವನ್ನು ಮರೆತು ಸತ್ಯವನ್ನು ಮರೆಮಾಚಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವ ಮುಖ್ಯ ವಾಹಿನಿಯ ಮಾಧ್ಯಮಗಳು ಕೂಡ ಜನಮನಸ್ಸುಗಳಲ್ಲಿ ಒಡಕುಂಟುಮಾಡುತ್ತಿವೆ. 

ಚೇತನ್ ಸಿಂಗ್ ಎಂಬ RPF ಯೋಧ ಚಲಿಸುತ್ತಿದ್ದ ರೈಲಿನಲ್ಲಿ ತನ್ನ ಸಹೋದ್ಯೋಗಿಯೂ ಸೇರಿದಂತೆ ನಾಲ್ಕು ಮಂದಿ ಅಮಾಯಕರನ್ನು ಗುಂಡಿಕ್ಕಿ ಕೊಲ್ಲಲು,  ಅಸ್ಸಾಂ ನಿರಾಶ್ರಿತ ಮೊಯಿನುಲ್ ಹಕ್ ನ ಮ್ರತದೇಹದ ಮೇಲೆ ಛಾಯಾಗ್ರಾಹಕ ಬನಿಯಾ  ರುದ್ರ ನರ್ತನಗೈಯ್ಯಲು , ಬಿಎಂಟಿಸಿ ಬಸ್ ಕಂಡಕ್ಟರ್’ನ ಟೋಪಿ ತೆಗೆಸಿ ಆತನ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು, ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಅನೈತಿಕ ಪೋಲೀಸ್’ಗಿರಿ ನಡೆಸಲು, ಹಿಜಾಬ್ ವಿವಾದದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಯೊಬ್ಬ ಪುಟ್ಟ ಶಾಲಾ ಬಾಲಕಿಯನ್ನು ಬೆನ್ನಟ್ಟಿ  ಅವಳಲ್ಲಿ ಭೀತಿಯನ್ನುಂಟು ಮಾಡಲು, ಅಲ್ಪವೂ ದಯೆ ದಾಕ್ಷಿಣ್ಯವಿಲ್ಲದೆ ಮಹಿಳೆಯರ ಮೇಲೆ ದೌರ್ಜನ್ಯವೆಸಗಿ ಅವರನ್ನು ನಗ್ನ ಮೆರವಣಿಗೆ ನಡೆಸಲು ಪ್ರೇರೇಪಿಸಿದ, ಪ್ರಚೋದಿಸಿದ,  ದ್ವೇಷ ಭಾಷಣಗಳಿಗೆ, ಮಾಧ್ಯಮಗಳ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು   ಸರ್ಕಾರಗಳು ತೋರುತ್ತಿರುವ   ನಿರ್ಲಕ್ಷ್ಯ ಧೋರಣೆಯು ಸಮಾಜವನ್ನು ಛಿದ್ರಗೊಳಿಸುತ್ತಿದೆ. ಈ ಸಂದರ್ಭಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ಮುಖ್ಯ ಬಲಿಪಶುವಾಗುತ್ತಿದ್ದಾರೆ ಎನ್ನುವುದು ಒಪ್ಪಿಕೊಳ್ಳಲೇಬೇಕಾದ ವಾಸ್ತವವಾಗಿದೆ. ದಿನಬೆಳಗಾದರೆ  ಕೇಳಿಬರುವ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ  ಮಹಿಳೆಯರ ಮೇಲಿನ ಹಲ್ಲೆ, ದೌರ್ಜನ್ಯಗಳ ವರದಿಗಳು ಭಯಭೀತರನ್ನಾಗಿಸಿದೆ.

ಆಹಾರದಂತೆಯೆ ಮನುಷ್ಯ ಬದುಕಿಗೆ  ಅವಶ್ಯವಾಗಿ ಬೇಕಾಗಿರುವುದು  ಭಯ ಮುಕ್ತವಾದ ನೆಮ್ಮದಿಯ ನಿರ್ಭೀತಿಯ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪೂರಕವಾದ ವಾತಾವರಣವಾಗಿದೆ.  ಸಂವಿಧಾನವು ಅವಕಾಶ ಕಲ್ಪಿಸಿದ ಈ ವಾತಾವರಣದ ಪುನಸ್ಥಾಪನೆ ಆಗುವವರೆಗೂ ಸ್ವಾತಂತ್ರ್ಯೋತ್ಸವದ ಆಚರಣೆ ಪರಿಪೂರ್ಣವಾಗಲಾರದು.



Join Whatsapp