ಮಂಗಳೂರು: ನ್ಯಾಪ್ ಟಾಲ್ ಸಂಸ್ಥೆ ಹೆಸರಿನಲ್ಲಿ ಬಂದ ರಿಜಿಸ್ಟರ್ ಪೋಸ್ಟ್ ವೊಂದನ್ನ ನಂಬಿ ವ್ಯಕ್ತಿಯೋರ್ವರು 7 ಲಕ್ಷ ರೂ. ಮಿಕ್ಕ ಹಣವನ್ನ ಕಳೆದುಕೊಂಡು ಮೋಸ ಹೋದ ಘಟನೆ ನಡೆದಿದೆ.
ಕಳೆದ 2020ರ ಡಿಸೆಂಬರ್ ತಿಂಗಳಿನಲ್ಲಿ ನ್ಯಾಪ್ ಟಾಲ್ ಸಂಸ್ಥೆ ಹೆಸರಿನಲ್ಲಿ ಬಂದಿದ್ದ ಪೋಸ್ಟ್ ನಲ್ಲಿ ಸ್ಕ್ರ್ಯಾಚ್ ಕಾರ್ಡ್ ದೊರೆತಿದ್ದು, ಅದನ್ನ ಸ್ಕ್ರ್ಯಾಚ್ ಮಾಡಿದಾಗ 12 ಲಕ್ಷ ರೂ. ಬಹುಮಾನವನ್ನ ಪಡೆದಿದ್ದೀರಿ ಅನ್ನೋದಾಗಿ ನಮೂದಿಸಲಾಗಿತ್ತು. ಅದರಂತೆ ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ವ್ಯಕ್ತಿಗೆ ತಮ್ಮ ಬ್ಯಾಂಕ್ ಅಕೌಂಟ್ ಹಾಗೂ ಇನ್ನಿತರ ದಾಖಲೆಗಳನ್ನ ಕೇಳಿದ್ದಾರೆ. ಈ ಎಲ್ಲಾ ದಾಖಲೆಗಳನ್ನ ವಾಟ್ಸಾಪ್ ಸಂದೇಶದ ಮೂಲಕ ರವಾನಿಸಿದ ಬಳಿಕ ಪ್ರದೀಪ್ ಪೂಜಾರಿ ಹೆಸರಲ್ಲಿ ಕರೆ ಮಾಡಿದ್ದ ವ್ಯಕ್ತಿಯೋರ್ವ ಆರಂಭದಲ್ಲಿ 46ಸಾವಿರ ರೂ. ಹಣವನ್ನ ವರ್ಗಾಯಿಸುವಂತೆ ತಿಳಿಸಿದ್ದಾರೆ.
ನಂತರ ಮಾರ್ಚ್ ವರೆಗೂ ಹಂತ ಹಂತವಾಗಿ 7,85,800ರೂ. ಗಳನ್ನ ಅವರ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಕೊನೆಗೂ ತಾನು ಮೋಸ ಹೋಗಿದ್ದಾಗಿ ಗೊತ್ತಾದ ಬಳಿಕ ಮೋಸ ಹೋದ ವ್ಯಕ್ತಿಯು ಇದೀಗ ಮಂಗಳೂರು ನಗರದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.