ವಿದ್ಯುತ್‌ ಆಘಾತಕ್ಕೆ ರೈತ ಬಲಿ; ತಾಲೂಕು ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ; ತಹಾಶೀಲ್ದಾರ್‌ ಮೇಲೆ ಡೀಸೆಲ್‌ ಸುರಿದ ಪ್ರತಿಭಟನಕಾರ

Prasthutha|

ಹೈದರಾಬಾದ್‌ : ತೆಲಂಗಾಣದ ಮೇಡಕ್‌ ಜಿಲ್ಲೆಯ ನರ್ಸಾಪುರ ವಲಯದ ಶಿವಂಪೇಟೆ ಮಂಡಲದ ತಹಾಶೀಲ್ದಾರ್‌ ಮೇಲೆ ಪ್ರತಿಭಟನಾ ನಿರತ ರೈತನೊಬ್ಬ ಡೀಸೆಲ್‌ ಸುರಿದ ಘಟನೆ ನಡೆದಿದೆ. ರೈತರೊಬ್ಬರು ಇತ್ತೀಚೆಗೆ ವಿದ್ಯುತ್‌ ಆಘಾತದಿಂದ ಸಾವಿಗೀಡಾಗಿದ್ದರು, ಅವರಿಗೆ ಪಾಸ್‌ ಬುಕ್‌ ಮಾಡಿಕೊಡುವಲ್ಲಿ ವಿಳಂಬವಾಗಿತ್ತು. ಹೀಗಾಗಿ ಆಕ್ರೋಶಿತರಾದ ರೈತರು ಪ್ರತಿಭಟನೆ ನಡೆಸಿದ ವೇಳೆ ಈ ಘಟನೆ ನಡೆದಿದೆ.

- Advertisement -

ಶಿವಂಪೇಟೆ ಗ್ರಾಮದ ತಳ್ಳಪಲ್ಲಿ ತಾಂಡಾದ ರೈತ ಬಾಲು ಎಂಬವರು ತನ್ನ ಪಾಸ್‌ ಬುಕ್‌ ಪಡೆಯಲು ಕಳೆದ ಕೆಲವು ವರ್ಷಗಳಿಂದ ತಹಾಶೀಲ್ದಾರ್‌ ಕಚೇರಿಗೆ ಅಲೆಯುತ್ತಿದ್ದರು. ಸೋಮವಾರ ಹೊಲದಲ್ಲಿ ಕೆಲಸ ಮಾಡುವಾಗ ಬಾಲು ವಿದ್ಯುತ್‌ ಆಘಾತದಿಂದ ಸಾವಿಗೀಡಾಗಿದ್ದರು. ತಮ್ಮ ಕೃಷಿ ಭೂಮಿಗೆ ಪಾಸ್‌ ಬುಕ್‌ ಇಲ್ಲದಿದ್ದುದರಿಂದ ಬಾಲುಗೆ ರೈತ ಬಿಮಾ ಯೋಜನೆಯಡಿ ಸಿಗಬಹುದಾಗಿದ್ದ ಐದು ಲಕ್ಷ ರೂ. ವಿಮೆ ಮಾಡಿಸಲು ಅಸಾಧ್ಯವಾಗಿತ್ತು.

ಹೀಗಾಗಿ ಬಾಲುವಿನ ನಿಧನದ ಸುದ್ದಿ ತಿಳಿದು ಆಕ್ರೋಶಿತರಾದ ರೈತರ ಗುಂಪೊಂದು, ಅವರ ಮೃತದೇಹವನ್ನು ಟ್ರಾಕ್ಟರ್‌ ನಲ್ಲಿ ತಹಾಶೀಲ್ದಾರ್‌ ಕಚೇರಿಗೆ ತಂದಿತ್ತು. ಈ ವೇಳೆ ಪ್ರತಿಭಟನೆಗಿಳಿದ ರೈತರು ತಮ್ಮ ಮೇಲೆ ಡೀಸೆಲ್‌ ಸುರಿದು ಆತ್ಮಹತ್ಯೆಗೆ ಯತ್ನಿಸಿದರು. ಬಳಿಕ ತಹಾಶೀಲ್ದಾರ್‌ ಭಾನು ಪ್ರಕಾಶ್‌ ಕಚೇರಿಯಿಂದ ಹೊರಬಂದಾಗ, ಪ್ರತಿಭಟನಕಾರರಲ್ಲಿ ಓರ್ವ ಅವರ ಮೇಲೂ ಡೀಸೆಲ್‌ ಸುರಿದು ಆಕ್ರೋಶ ಹೊರಹಾಕಿದ್ದಾನೆ.

- Advertisement -

ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಬಾಲು ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದುದರಿಂದ, ಈ ಭೂಮಿಗೆ ಪಾಸ್‌ ಬುಕ್‌ ನೀಡಲು ಸಾಧ್ಯವಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

Join Whatsapp