ನಾರ್ವೆ: ನ್ಯಾಟೊ ಯುದ್ಧ ತರಬೇತಿ ಸಂದರ್ಭದಲ್ಲಿ ವಿಮಾನವೊಂದು ಪತನಗೊಂಡಿದ್ದು, ನಾಲ್ವರು ಅಮೆರಿಕನ್ ಯೋಧರು ಸಾವನ್ನಪ್ಪಿದ್ದಾರೆ. ಈ ಘಟನೆಗೂ ರಷ್ಯಾ – ಉಕ್ರೇನ್ ಬಿಕ್ಕಟ್ಟಿಗೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ಎಂದು ನಾರ್ವೆ ಪ್ರಧಾನಿ ಜೋನಸ್ ಗರ್ ಸ್ಟೋರ್ ತಿಳಿಸಿದ್ದಾರೆ.
ಪತನಗೊಂಡ ವಿ-22ಬಿ ಓಸ್ಪ್ರೇ ವಿಮಾನವು ಅಮೆರಿಕಕ್ಕೆ ಸೇರಿದ್ದಾಗಿದೆ ಎಂದು ನಾರ್ವೆಯ ಸಶಸ್ತ್ರ ಪಡೆಗಳು ತಿಳಿಸಿವೆ.
ಸೈನಿಕರು ಯುದ್ಧ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದ ವೇಳೆ ನಡೆದ ಈ ದುರಂತದಲ್ಲಿ ಅಮೆರಿಕನ್ ಯೋಧರು ಸಾವನ್ನಪ್ಪಿದ್ದಾರೆ ಎಂದು ನಾರ್ವೆ ಪ್ರಧಾನಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಮೃತ ಯೋಧರ ಕುಟುಂಬ, ಸಂಬಂಧಿಕರು ಮತ್ತು ಸಹಯೋಧರಿಗೆ ಅವರು ಸಂತಾಪವನ್ನು ಸೂಚಿಸಿದ್ದಾರೆ.