ಟ್ರ್ಯಾಕ್ಟರ್‌ ಗೆ ಲಾರಿ ಡಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು, 40 ಮಂದಿಗೆ ಗಂಭೀರ ಗಾಯ

Prasthutha|

ಸೊಲ್ಲಾಪುರ: ಪಂಡರಾಪುರಕ್ಕೆ ತೆರಳುತ್ತಿದ್ದ ಭಕ್ತರ ಟ್ರ್ಯಾಕ್ಟರ್‌’ಗೆ ವೇಗವಾಗಿ ಬಂದ  ಲಾರಿ ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ 40 ಮಂದಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.

- Advertisement -

ಗಾಯಾಳುಗಳಲ್ಲಿ ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಸೊಲ್ಲಾಪುರದಿಂದ ಮೊಹೋಲ್ ಮಾರ್ಗವಾಗಿ ಪಂಡರಾಪುರಕ್ಕೆ ತೆರಳುತ್ತಿದ್ದಾಗ ಕೊಂಡಿ – ಕೇಗಾಂವ್ ನಡುವೆ ಇದ್ದಾಗ ಹಿಂಬದಿಯಿಂದ ಬಂದ ಲಾರಿ ಟ್ರ್ಯಾಕ್ಟರ್’​ಗೆ ಡಿಕ್ಕಿ ಹೊಡೆದಿದೆ.

- Advertisement -

ಡಿಕ್ಕಿ ರಭಸಕ್ಕೆ ಟ್ರ್ಯಾಕ್ಟರ್​’ನಲ್ಲಿದ್ದ ಭಕ್ತರು ಮೇಲಕ್ಕೆ ಹಾರಿ ರಸ್ತೆಯಲ್ಲಿ ಚೆಲ್ಲಾ – ಪಿಲ್ಲಿಯಾಗಿ ಬಿದ್ದಿದ್ದಾರೆ. ಈ ವೇಳೆ ನಾಲ್ವರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಸೊಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಹಾಗೂ ಗಾಯಗೊಂಡವರೆಲ್ಲರೂ ತುಳಜಾಪುರ ತಾಲೂಕಿನ ಕಡಮವಾಡಿ ನಿವಾಸಿಗಳು. ಈ ಎಲ್ಲ ಭಕ್ತರು ಏಕಾದಶಿ ನಿಮಿತ್ತ ಟ್ರ್ಯಾಕ್ಟರ್‌ನಲ್ಲಿ ಪಂಡರಾಪುರಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು.

ಸ್ಥಳೀಯರೊಂದಿಗೆ ಜೊತೆಗೂಡಿದ ಪೊಲೀಸರು ಸುಮಾರು ಎರಡು ಗಂಟೆಗಳ ಕಾಲ ಪರಿಹಾರ ಕಾರ್ಯ ಕೈಗೊಂಡರು. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Join Whatsapp